ಮೈಸೂರು

ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ : ನುಡಿದಂತೆ ನಡೆದ ಸಿಎಂ.

ಮೈಸೂರು, ಜೂ.23- ಮುಖ್ಯಮಂತ್ರಿ ಸಿದ್ದರಾಮಯ್ಯ 2015ರ ಜ.13ರಂದು ನಡೆದ ಬೃಹತ್ ಭೋವಿ ಸಮಾವೇಶದಲ್ಲಿ ನೀಡಿದ್ದ ಆಶ್ವಾಸನೆಯಂತೆ ಹಾಗೂ ಕಳೆದ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಂತೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿ ನುಡಿದಂತೆ ನಡೆದು ಆದರ್ಶ ಮೆರೆದಿದ್ದಾರೆಂದು  ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ  ಜಿ.ವಿ ಸೀತಾರಾಮ್ ಹರ್ಷ ವ್ಯಕ್ತಪಡಿಸಿದರು.

ಶುಕ್ರವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ, ನಿಗಮ ಲೋಕಾರ್ಪಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲವೆಂದ ಅವರು, ಜಿ.ವೈ. ಕೃಷ್ಣನ್ ನಂತರ ಭೋವಿ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಮುಖ್ಯಮಂತ್ರಿ, ಸಿದ್ದರಾಮಯ್ಯನವರು ಒದಗಿಸಿದ್ದು ಅವರ ಅವಧಿಯಲ್ಲಿ ಓರ್ವ ಕಾಂಗ್ರೇಸ್ ಶಾಸಕರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಹಾಗೂ ನನ್ನನ್ನು ನಿಗಮದ ಅಧ್ಯಕ್ಷನನ್ನಾಗಿ ಮಾಡಿರುವುದು ಭೋವಿ ಸಮಾಜದ ಅಭಿವೃದ್ಧಿಗೆ ಬೆಂಬಲವಾಗಿದ್ದಾರೆ ಎಂದು ತಿಳಿಸಿ, ಪ್ರತಿ ತಾಲ್ಲೂಕುಗಳಲ್ಲಿ ಸಮಾಜದ ಸಮುದಾಯ ಭವನ, ಹಾಸ್ಟೆಲ್ ವ್ಯವಸ್ಥೆ ಹಾಗೂ ಕಾಲೋನಿಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿ, ನಿಗಮಕ್ಕೆ ಇದುವರೆಗೆ ಮುಖ್ಯಮಂತ್ರಿಗಳು 60 ಕೋಟಿ ರೂ. ಗಳನ್ನು ನೀಡಿದ್ದು, ಇದರಲ್ಲಿ ಜನಾಂಗದವರಿಗೆ 52 ಕೋಟಿ ರೂ. ಗಳ ಕ್ರಿಯಾಯೋಜನೆ ರೂಪಿಸಿ ಸಾಲಸೌಲಭ್ಯಗಳನ್ನು ನಿಗಮದ ವತಿಯಿಂದ ನೀಡಲಾಗಿದೆ. ಇದರೊಂದಿಗೆ ಕುಲಕಸುಬಿಗೆ ಅವಶ್ಯವಿರುವ ಆಧುನಿಕ ಯಂತ್ರೋಪಕರಣಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

2011ರ ಜನಗಣತಿಯಲ್ಲಿ ರಾಜ್ಯದಲ್ಲಿ 12 ಲಕ್ಷ ಕುಲಬಾಂಧವರಿದ್ದು, ಜನಸಂಖ್ಯೆಗನುಗುಣವಾಗಿ ನಿಗಮವನ್ನು ಸ್ಥಾಪಿಸಿರುವುದಕ್ಕೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚಿರಋಣಿಯಾಗಿರುತ್ತೇನೆ ಎಂದರು ಸಮಾಜ ಕಲ್ಯಾಣ ಇಲಾಖೆಯು ಜನಸಂಖ್ಯೆ ಅನುಗುಣವಾಗಿ ನೀಡುತ್ತಿರುವ ಶೇಕಡವಾರು  ಹಣವನ್ನು ನಮ್ಮ ಜನಾಂಗಕ್ಕೂ ಬಿಡುಗಡೆ ಮಾಡಿದಲ್ಲಿ ಜನಾಂಗವು ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದ ಅವರು ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೆಳೆಯುವುದಾಗಿ ತಿಳಿಸಿದರು. ಸರ್ಕಾರವು ಸ್ಥಾಪಿಸಿರುವ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮವನ್ನು ಲೋಕಾರ್ಪಣೆ ಮಾಡುವ ಸಲುವಾಗಿ ಇಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಲೋಕಾರ್ಪಣಾ ದಿನಾಂಕವನ್ನು ನಿಗದಿ ಪಡಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಮಲ್ಲಯ್ಯ, ಖಜಾಂಚಿ ಬಸವರಾಜ್, ಲೋಕೇಶ್, ಗುರುಮೂರ್ತಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: