ಕರ್ನಾಟಕಪ್ರಮುಖ ಸುದ್ದಿ

ಯಾರ ಬೆದರಿಕೆಗೂ ಜಗ್ಗಿ ಸಾಲ ಮನ್ನಾ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

 ಪ್ರಮುಖ ಸುದ್ದಿ, ಬೆಂಗಳೂರು, ಜೂ.23: ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಪಿಸಿಸಿ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಅನ್ನದಾತ ಸಂಕಷ್ಟದಲ್ಲಿದ್ದಾನೆ. 2015-16ನೇ ಸಾಲಿನಲ್ಲಿ ಸಾವಿರಕ್ಕೂ ಹೆಚ್ಚು, 2017 ರಲ್ಲಿ 800 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ಅನ್ನದಾತನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.  ಸಿದ್ದರಾಮಯ್ಯ ಕೇವಲ ಸಾಲ ಮನ್ನಾ ಮಾಡಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ರೈತರ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಸಿದ್ದರಾಮಯ್ಯನವರು  ಸಾಲ ಮನ್ನಾ ಮಾಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಅವಕಾಶ ಮಾಡಿ ಕೊಡಬಾರದು. ಕೇಂದ್ರ ಸರ್ಕಾರದ ಮೇಲೆ ಸಾಲಮನ್ನಾ ಒತ್ತಡ ತರುವ ರೈತ ಸಂಘಟನೆಗಳ ಎಲ್ಲ ಪ್ರತಿಭಟನೆಗಳಿಗೂ ಕಾಂಗ್ರೆಸ್ ಸಾಥ್ ಕೊಡುತ್ತದೆ ಎಂದು ತಿಳಿಸಿದರು.

ಇನ್ನೂ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಸಿಎಂ ನನ್ನ ಜೊತೆ  ಚರ್ಚೆ ಮಾಡಿಲ್ಲ. ಸೋಮವಾರ ವಿಸ್ತರಣೆ ಆಗುತ್ತದೆ ಎನ್ನುವುದು ಗೊತ್ತಿಲ್ಲ ಎಂದರು. ಎಂ ಎಲ್ ಸಿ ಗೋವಿಂದರಾಜು ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದಾರೆ.ಇನ್ನೂ ತನಿಖೆ ನಡೆಯುತ್ತಿದ್ದು, ರಹಸ್ಯವಾಗಿರುತ್ತದೆ ಎಂದರು. ಗೃಹ ಸಚಿವ ಸ್ಥಾನಕ್ಕೆ ನಾನು ನೀಡಿದ್ದ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿಕೆ ರೈತ ವಿರೋಧಿ ಹೇಳಿಕೆಯಾಗಿದೆ. ಕೇಂದ್ರ ಹಣಕಾಸು ಸಚಿವ ಮತ್ತು ಆರ್ ಬಿ ಐ ಗವರ್ನರ್  ಎಲ್ಲರೂ ರೈತ ವಿರೋಧಿ ಧೋರಣೆ ಹೊಂದಿದ್ದಾರೆ.  ಯಡಿಯೂರಪ್ಪನಂತಹ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ಯಾರ ಬೆದರಿಕೆಗೂ ಜಗ್ಗಿ ಸಾಲ ಮನ್ನಾ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ರೈತರ ಕಾಳಜಿ ಕಾಂಗ್ರೆಸ್ಸಿಗಿದೆ. ದೇಶದಲ್ಲಿ ಹಸಿರು ಕ್ರಾಂತಿ ಮಾಡಿದವರು, ಆಹಾರದ ಭದ್ರತೆ ಮಾಡಿದವರು ಕಾಂಗ್ರೆಸ್ ನವರು ಬಿಜೆಪಿಯವರಲ್ಲ. ದೇಶಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ. ಕಾಂಗ್ರೆಸ್ 60 ವರ್ಷ ಮಾಡದ ಸಾಧನೆಯನ್ನು ಐದು ವರ್ಷದಲ್ಲಿ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಸಾಲ ಮನ್ನಾ ಮಾಡಲು ಸಿದ್ದರಾಮಯ್ಯನಿಗೇನು ದಾಡಿ ಎಂದು ಶರ್ಟ್ ಕಾಲರ್ ಹಿಡಿದು ಕೇಳುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಈಗ ಅದೇ ಯಡಿಯೂರಪ್ಪ ನರೇಂದ್ರ ಮೋದಿ ಶರ್ಟ್ ಕಾಲರ್ ಹಿಡಿದು ಕೇಳಲಿ ಎಂದು ಹರಿಹಾಯ್ದರು.

ಪ್ರಧಾನಿ ಭೇಟಿ ವೇಳೆಯೂ ಬಿಜೆಪಿಯವರು ಸಾಲ ಮನ್ನದ ಬಗ್ಗೆ ಚಕಾರ ಎತ್ತಲಿಲ್ಲ. ಸಂಸತ್ತಿನಲ್ಲೂ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಯಾರೂ ಸಾಲ ಮನ್ನಾ ಬಗ್ಗೆ ಮಾತನಾಡಿಲ್ಲ ಎಂದರು. ಸಾಲ ಮನ್ನಾ ಕುರಿತು ಸಂಪುಟದಲ್ಲಿಯೂ ತೀರ್ಮಾನ ಕೈಗೊಂಡಿದ್ದೇವೆ. ನಾಳೆಯೇ ಸರ್ಕಾರ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ಬಿ.ಎಲ್. ಶಂಕರ್, ಸಚಿವ ಆಂಜನೇಯ, ಬಿ ಕೆ ಚಂದ್ರಶೇಖರ್, ಸುದರ್ಶನ, ರಾಣಿ ಸತೀಶ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಸಂಸದ ಚಂದ್ರಪ್ಪ ಸೇರಿ ಇತರರು ಉಪಸ್ಥಿತರಿದ್ದರು. (ವರದಿ: ಎಸ್.ಎನ್, ಎಲ್.ಜಿ)

 

 

Leave a Reply

comments

Related Articles

error: