ಮೈಸೂರು

ಎಲ್ಲರೂ ಯೋಗಾಭ್ಯಾಸ ಮಾಡಿ ರೋಗಮುಕ್ತರಾಗಿರಿ: ಶಾಸಕ ಎಂ.ಕೆ. ಸೋಮಶೇಖರ್

ಯೋಗ ಪ್ರಾಚೀನ ಕಲೆಯಾಗಿದ್ದು ಎಲ್ಲ ರೋಗಗಳಿಗೂ ಸಿದ್ದೌಷಧ. ವಿಶ್ವದಾದ್ಯಂತ ಎಲ್ಲರೂ ಯೋಗಕ್ಕೆ ಮಾರು ಹೋಗಿದ್ದು ವಿಶ್ವ ಮಟ್ಟದಲ್ಲಿ ಭಾರತ ಮನ್ನಣೆ ಗಳಿಸುತ್ತಿದೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೆಮ್ಮೆಯ ನುಡಿಗಳನ್ನಾಡಿದರು.

ದಸರಾ ಅಂಗವಾಗಿ ಯೋಗ ದಸರಾ ಉಪಸಮಿತಿ ಭಾನುವಾರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ಪ್ರಾಚೀನ ಕಾಲಕ್ಕಿಂತ ಇಂದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ವಿದೇಶಿಗರು ಯೋಗಕ್ಕೆ ಮಾರುಹೋಗಿ ಯೋಗಾಭ್ಯಾಸ ಮಾಡಲು ನಗರಕ್ಕೆ ಆಗಮಿಸುತ್ತಿದ್ದಾರೆ. ಆದರೆ ಯೋಗವನ್ನು ಪರಿಚಯಿಸಿದ ನಾವೇ ಯೋಗಾಭ್ಯಾಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಯೋಗ ಎಲ್ಲ ರೋಗಗಳಿಗೂ ರಾಮಬಾಣವಾಗಿದ್ದು, ಮನಸ್ಸನ್ನು ಕೇಂದ್ರೀಕರಿಸಿ, ಜ್ಞಾಪಕ ಶಕ್ತಿಯನ್ನು ವೃದ್ಧಿಸುವುದಲ್ಲದೆ ಶಾರೀರಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಹಾಗಾಗಿ ಎಲ್ಲರೂ ಯೋಗಾಭ್ಯಾಸ ಮಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಬಿ.ಎಲ್.ಭೈರಪ್ಪ ಅವರು, ಯೋಗ ಇಂದು ವಿಶ್ವವಿದ್ಯಾನಿಲಯದಂತಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಮೈಸೂರು ಯೋಗದ ತವರು ಮನೆಯಾಗಿದ್ದು ವಿವಿಧೆಡೆಗಳಿಂದ ಸಾವಿರಾರು ಮಂದಿ ಯೋಗಾಭ್ಯಾಸ ಮಾಡಲು ಪ್ರತಿನಿತ್ಯ ಧಾವಿಸಿ ಬರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸ ಒಳ್ಳೆಯದಾಗಿದ್ದು ನಗರದ ಸ್ವಚ್ಛತೆಯನ್ನು ಕಾಪಾಡುವುದು ಕೂಡ ಉತ್ತಮ. ಆರೋಗ್ಯಕ್ಕೆ ಪೂರಕ ಎಂದು ಸಲಹೆ ನೀಡಿದರು.

ಸ್ಪರ್ಧೆ 8 ವಿಭಾಗಗಳಲ್ಲಿ ನಡೆಯಿತು. 8 ರಿಂದ 10 ವರ್ಷ, 11 ರಿಂದ 14 ವರ್ಷ, 15 ರಿಂದ 18 ವರ್ಷ, 19 ರಿಂದ 25 ವರ್ಷ, 26 ರಿಂದ 35 ವರ್ಷ, 36 ರಿಂದ 45 ವರ್ಷ, 46 ರಿಂದ 55 ವರ್ಷ ಹಾಗೂ 56 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು ಭಾಗವಹಿಸಿದ್ದರು. ಬೆಂಗಳೂರು, ದಾವಣಗೆರೆ, ಹರಿಹರ, ಮಂಡ್ಯ, ಹಾಸನ, ಕೆ.ಆರ್.ನಗರ, ದೊಡ್ಡಬಳ್ಳಾಪುರ, ಯಾದಗಿರಿ ಸೇರಿದಂತೆ ನಗರದ 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮೊದಲ ಬಹುಮಾನ ಪಡೆದವರಿಗೆ 1000 ರು. ನಗದು, 2ನೇ ಬಹುಮಾನ 750 ರು. ಹಾಗೂ ಮೂರನೇ ಬಹುಮಾನವಾಗಿ 500 ರು. ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ಸ್ಥಳದಲ್ಲೇ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್, ಯೋಗ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ನಟರಾಜ್, ಯೋಗ ದಸರಾ ವಿಶೇಷಾಧಿಕಾರಿ ಕಲಾ ಕೃಷ್ಣಸ್ವಾಮಿ, ಆಯುಷ್ ಅಧಿಕಾರಿ ಬಿ.ಎಸ್. ಸೀತಾಲಕ್ಷ್ಮಿ, ಯೋಗ ಕೂಟದ ಅಧ್ಯಕ್ಷ ವೆಂಕಟೇಶಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: