ಮೈಸೂರು

ರೈತರ ಸಾಲ 50,000 ಮನ್ನಾ: ಸಂಸದ ಧ್ರುವನಾರಾಯಣ ಅಭಿನಂದನೆ

ಮೈಸೂರು(ನಂಜನಗೂಡು)ಜೂ.23:-  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕೃಷಿ ಸಾಲವಾದ 50,000 ರೂ.ಗಳನ್ನು ಮನ್ನಾ ಮಾಡಿರುವುದಕ್ಕೆ ಸಂಸದ ಧ್ರುವನಾರಾಯಣ್‍ರವರು ಅಭಿನಂದನೆ ಸಲ್ಲಿಸಿದರು.
ನಂಜನಗೂಡು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕೃಷಿ ಸಾಲವಾದ 50,000 ರೂ.ಗಳನ್ನು ಮನ್ನಾ ಮಾಡಿರುವುದರಿಂದ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದರು. ರಾಜ್ಯದಲ್ಲಿ 22,27,000 ರೈತರಿಗೆ ಇದರ ಉಪಯೋಗವಾಗಿದೆ ಎಂದರು.
ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ನೀಡಿದ ಮಾತಿನಂತೆ ಹಲವು ಬೇಡಿಕೆಗಳನ್ನು ಕೊಟ್ಟ ಮಾತಿನಂತೆ ಉಳಿಸಿಕೊಂಡಿದೆ ಅದೇ ರೀತಿ ರೈತರ ಸಾಲ ಮನ್ನಾ ಕೂಡ ಮಾಡಿದೆ ಎಂದರು. ಕೆಲವು ಬಿ.ಜೆ.ಪಿ. ನಾಯಕರು ರೈತರ ಸಾಲ ಮನ್ನಾ ಮಾಡಿರುವುದನ್ನು ಅಭಿನಂದಿಸದೇ ನಮ್ಮ ಹೋರಾಟಕ್ಕೆ ಹೆದರಿ ಸಾಲ ಮನ್ನಾ ಮಾಡಿರುವುದು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲಾ ನಿಲ್ಲಿಸಿ ರಾಜ್ಯ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾವನ್ನು ಅಭಿನಂದಿಸಿ ಜೊತೆಗೆ ಕೇಂದ್ರ ಸರ್ಕಾರಕ್ಕೆ ಬಿ.ಜೆ.ಪಿ. ನಾಯಕರು ಉಳಿದ ರೈತರ ಸಾಲವನ್ನು ಮನ್ನಾ ಮಾಡಲು ಒತ್ತಡ ಹೇರಬೇಕು ಇದನ್ನೆಲ್ಲಾ ಬಿಟ್ಟು ಕೇವಲ ಮಾತಿನಲ್ಲೇ ಕಾಲಕಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಹುಲ್ಲಹಳ್ಳಿ ಮಾದಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮೂಗಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್‍ರಾಜು, ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್):

Leave a Reply

comments

Related Articles

error: