ಸುದ್ದಿ ಸಂಕ್ಷಿಪ್ತ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಮನವಿ

ಮಡಿಕೇರಿ, ಜೂ.23: ಭಾರತ ಚುನಾವಣಾ ಆಯೋಗವು ಪ್ರತಿ ವರ್ಷದಂತೆ ಈ ವರ್ಷವು  ಹೆಚ್ಚು ಹೆಚ್ಚು ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ (ಅದರಲ್ಲೂ 18-19 ವರ್ಷದ ಯುವಕರು) ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರೀಕರು, ಯುವಕರು-ಯುವತಿಯರು ದಿನಾಂಕ:01-01-2017ಕ್ಕೆ 18 ವರ್ಷ ಪೂರ್ಣವಾಗಿದ್ದಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.

ದಿನಾಂಕ:01-07-2017 ರಿಂದ 31-07-2017ರ ವರೆಗೆ ನಿಮ್ಮ ಮತಗಟ್ಟೆ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಲಿದ್ದು, ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇದ್ದಲ್ಲಿ (ನಮೂನೆ-6) ಮತ್ತು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಮತದಾರರು ತಮ್ಮ ಗುರುತಿನ ಚೀಟಿ/ಮತದಾರರ ಪಟ್ಟಿಯಲ್ಲಿನ ನಮೂದುಗಳಲ್ಲಿ ವ್ಯತಿರಿಕ್ತವಾಗಿದ್ದಲ್ಲಿ ಅಥವಾ ತಪ್ಪುಗಳಿದ್ದಲ್ಲಿ ಸರಿಪಡಿಸಲು (ನಮೂನೆ-8) ಮತ್ತು ಸೇರ್ಪಡೆಯಾಗಿರುವ ಮತದಾರರು ಮರಣ, ಸ್ಥಳಾಂತರ, ಒಬ್ಬ ಮತದಾರ ಎರಡು ಬಾರಿ ನೋಂದಣಿಯಾಗಿದ್ದರೆ ಮತ್ತು ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ (ನಮೂನೆ-7) ಮತ್ತು ಒಂದೇ ವಿಧಾನ ಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಬಯಸುವವರು (ನಮೂನೆ-8ಎ) ನಿಗಧಿತ ನಮೂನೆಗಳಲ್ಲಿ ಪೂರಕ ದಾಖಲೆಗಳೊಂದಿಗೆ ನಿಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ. ಹಾಗೂ ನಮೂನೆ-6, 7, 8 ಮತ್ತು 8ಎ ಅರ್ಜಿಗಳನ್ನು ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ಇವರ ಕಚೇರಿಗೆ ಸಲ್ಲಿಸಬಹುದಾಗಿದೆ. ಮತ್ತು ಈ ವೆಬ್ ಸೈಟ್‍ನಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ನೋಡಬಹುದಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: