ಕರ್ನಾಟಕಪ್ರಮುಖ ಸುದ್ದಿ

ವಾರದೊಳಗೆ ಮೆಟ್ರೋದಲ್ಲಿ ಹಿಂದಿ ತೆಗೆಯದಿದ್ರೆ ದಾಳಿ : ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ

ಬೆಂಗಳೂರು, ಜೂ.24 : ಕರ್ನಾಟಕದ ರಾಜಧಾನಿ ಬೆಂಗಳೂರು ಮೆಟ್ರೋದಲ್ಲಿ ಅಳವಡಿಸಿರುವ ಹಿಂದಿ ನಾಮಫಲಕಗಳನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಸಂಘಟನೆಯಿಂದಲೇ ನಾಮಫಲಕಗಳನ್ನು ಕಿತ್ತೆಸೆಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಹಿಂದಿ ನಾಮಫಲಕ ಅಳವಡಿಕೆ ಖಂಡಿಸಿ ಬೆಂಗಳೂರಿನ ಶಾಂತಿನಗರದ ಬಿಎಂಆರ್ಸಿಎಲ್ ಕಚೇರಿ ಮುಂಭಾಗ ಶುಕ್ರವಾರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳ ಮಾನತಾಡಿದ ಅವರು, ಹಿಂದಿ ಹೇರಿಕೆ ವಾಪಸ್ ಪಡೆಯದಿದ್ದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಸಂಘಟನೆ ಸಿದ್ಧ. ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ನೆಪದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿದೆ.  ಹಿಂದಿ ಅಳವಡಿಸಿಕೊಳ್ಳುವಂತೆ 2016ರಲ್ಲಿ ಪತ್ರ ಬರೆದಿದೆ. ಆದರೆ, ಇಲ್ಲಿನ ಸ್ಥಳೀಯ ಅಧಿಕಾರಿಗಳು 2011ರಿಂದಲೇ ಹಿಂದಿ ಮೇಲಿನ ಭಾಷಾಭಿಮಾನ ಮತ್ತು ಪ್ರೇಮವನ್ನು ಕನ್ನಡಿಗರ ಮೇಲೆ ಹೇರುತ್ತಿದ್ದಾರೆ. ಉತ್ತರ ಭಾರತದ ಭಾಷೆಯನ್ನು ರಾಷ್ಟ್ರ ಭಾಷೆ ನೆಪದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಪ್ರಾದೇಶಿಕ ಭಾಷೆ ಜತೆ ಇಂಗ್ಲಿಷ್ ಅಳವಡಿಸಿಸಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲೂ ಇದೇ ರೀತಿ ದ್ವಿಭಾಷಾ ಸೂತ್ರ ಅನುಸರಿಸಿ ತ್ರಿಭಾಷಾ ಸೂತ್ರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರಕ್ಕೆ ಪತ್ರ : ಬಿಎಂಆರ್‍ಸಿಎಲ್‍

ಪ್ರತಿಭಟನಾಕಾರರು ಸಲ್ಲಿಸಿದ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಬಿಎಂಆರ್ಸಿಎಲ್ ವ್ಯವ​ಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ ಅವರು, ಹಿಂದಿ ಬಳಕೆಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬಳಸಲಾಗುತ್ತಿದೆ. ಇದೀಗ ಹಿಂದಿಗೆ ಪ್ರತಿಭಟನೆ ವ್ಯಕ್ತವಾಗುತ್ತಿರುವ ವಿಷಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

-ಎನ್.ಬಿ.

Leave a Reply

comments

Related Articles

error: