ಮೈಸೂರು

ವಿಜಯದಶಮಿ ಜಂಬೂ ಸವಾರಿಗೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ: ಸಚಿವರಿಂದ ಸಿದ‍್ಧತೆ ಪರಿಶೀಲನೆ

ಮೈಸೂರು: ಅ.11, ಮಂಗಳವಾರದಂದು ನಡೆಯುವ ದಸರಾ ಮಹೋತ್ಸವದ ಸಾಂಪ್ರಾದಾಯಿಕ ವೈಭವದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಮೈಸೂರು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಕಳೆದ ಒಂಭತ್ತು ದಿನಗಳಿಂದ ಹೊಸ ರೂಪದಲ್ಲಿ ಕಂಗೊಳಿಸುತ್ತಿರುವ ಇಡೀ ಮೈಸೂರು ನಗರವು, ಜಂಬೂ ಸವಾರಿ ಜೊತೆ ಸಾಗುವ ರಾಜ್ಯದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು, ಕಲಾವಿದರ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ. ಅರಮನೆಯಿಂದ ಹೊರಡುವ ಪ್ರದರ್ಶನವು ಸಂಪ್ರದಾಯದಂತೆ ಬನ್ನಿಮಂಟಪದಲ್ಲಿ ಸಮಾಪ್ತಿಯಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‍.ಸಿ. ಮಹದೇವಪ್ಪ, ಪೊಲೀಸ್ ಕಮಿಷನರ್‍ ಬಿ. ದಯಾನಂದ, ಜಿಲ್ಲಾಧಿಕಾರಿ ರಂದೀಪ್‍ ಅವರು ಇಂದು (ಅ.10) ಅರಮನೆಗೆ ಭೇಟಿ ನೀಡಿ ವಿಜಯದಶಮಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೈಸೂರು ಅರಮನೆಯ ಬಲರಾಮದ್ವಾರದಲ್ಲಿ ಮಂಗಳವಾರ ಮಧ್ಯಾಹ್ನ 2.16ರ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 2.45 ಕ್ಕೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮೆರವಣಿಗೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಬಾರಿಯ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ 50 ಸ್ತಬ್ಧಚಿತ್ರಗಳು, 100 ಕಲಾ ತಂಡಗಳು ಭಾಗವಹಿಸಲಿವೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಆಗಮಿಸಿರುವ 600 ಕ್ಕೂ ಹೆಚ್ಚು ಕಲಾವಿದರು ಸ್ತಬ್ಧಚಿತ್ರಗಳ ತಯಾರಿಯಲ್ಲಿ ತೊಡಗಿದ್ದು, ಅಂತಿಮ ತಯಾರಿಯಲ್ಲಿ ನಿರತರಾಗಿದ್ದಾರೆ.

ಪ್ರೇಕ್ಷಕರಿಗಾಗಿ ಹತ್ತು ಸಾವಿರಕ್ಕೂ ಹೆಚ್ಚಿನ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ನಾಲ್ಕುವರೆ ಸಾವಿರ ಪೊಲೀಸರನ್ನು ಭದ್ರತೆ ಕಾಪಾಡಲು ನಿಯೋಜಿಸಲಾಗಿದೆ. ಅನೇಕ ಕಡೆ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದು, ಮೆರವಣಿಗೆಯೂ ಯಾವುದೇ ತೊಂದರೆ ಇಲ್ಲದಂತೆ ಸಾಗಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ದಸರಾ ಮೆರವಣಿಗೆ ಸಂದರ್ಭ ಪ್ರವಾಸಿಗರು ಅಥವಾ ಪ್ರೇಕ್ಷಕರು ಪಾರಂಪರಿಕ ಕಟ್ಟಡಗಳನ್ನು ಏರುವುದಕ್ಕೆ ಈ ವರ್ಷದಿಂದ ನಿಷೇಧಿಸಲಾಗಿದೆ.

Leave a Reply

comments

Related Articles

error: