ಕರ್ನಾಟಕ

ಪತ್ರಕರ್ತರಿಗೆ ರಕ್ಷಣೆ ನೀಡಿ: ಸಿಎಂ ಅವರಿಗೆ ಮನವಿ ಸಲ್ಲಿಕೆ

ಬೆಂಗಳೂರು,ಜೂ.24-ಹಕ್ಕುಬಾಧ್ಯತೆಗೆ ಗುರಿಯಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಸಭಾ ಅಧ್ಯಕ್ಷರ ತೀರ್ಪನ್ನು ಪುನರ್ ಪರಿಶೀಲಿಸಿ ಈ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.

ಇತ್ತೀಚಿನ ಕೆಲ ಬೆಳವಣಿಗೆಗಳು ಪತ್ರಿಕಾರಂಗಕ್ಕೆ ದೊಡ್ಡ ಆತಂಕವನ್ನು ಉಂಟು ಮಾಡಿರುವುದು ಮಾತ್ರವಲ್ಲದೆ, ಗೊಂದಲವನ್ನುಂಟು ಮಾಡಿದೆ. ಮುಖ್ಯವಾಗಿ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಹಕ್ಕು ಬಾಧ್ಯತಾ ಸಮಿತಿಯು ಮಂಡಿಸಿದ ವರದಿಯ ಪ್ರಕಾರ ಸಭಾಧ್ಯಕ್ಷರು ಇಬ್ಬರು ಪತ್ರಕರ್ತರಿಗೆ ಶಿಕ್ಷೆ ಘೋಷಿಸಿರುವುದು ಇಡೀ ಪತ್ರಿಕಾ ಬಳಗವನ್ನು ಆತಂಕಕ್ಕೀಡು ಮಾಡಿದೆ ಎಂದಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಭಾಧ್ಯಕ್ಷರು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಇಂತಹ ಬರವಣಿಗೆಳು ಅನೇಕ ದಶಕಗಳಿಂದ ಶಾಸಕಾಂಗ ಮತ್ತು ಪತ್ರಿಕಾರಂಗದ ನಡುವೆ ಇರುವ ಬಾಂಧವ್ಯ ಸೌಹಾರ್ದತೆಗೆ ಧಕ್ಕೆ ತಂದಂತಾಗಿದೆ. ಹೀಗಾಗಿ ಈ ಆದೇಶವನ್ನು ಮರು ಪರಿಶೀಲಿಸಿ ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಆರ್.ಟಿ.ವಿಠಲಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಚಂದ್ರಶೇಖರ್, ಎಚ್.ವಿ.ಕಿರಣ್ ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: