ಕರ್ನಾಟಕ

ದಲಿತ ನಾಯಕ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ದಲಿತರಿಗೆ ನೀಡಿದ ಮನ್ನಣೆ : ಹುಚ್ಚಯ್ಯ

ರಾಜ್ಯ (ತುಮಕೂರು)ಜೂ.24:- ಪ್ರಧಾನಮಂತ್ರಿ ನರೇಂದ್ರಮೋದಿ  ದಲಿತ ನಾಯಕ ಬಿಹಾರದ ರಾಜ್ಯಪಾಲ ಉತ್ತಮ ವ್ಯಕ್ತಿಯಾದ ರಾಮನಾಥ ಕೋವಿಂದ್ ಅವರನ್ನು ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿಗೆ ಎನ್‍ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ದಲಿತರಿಗೆ ನೀಡಿದ ಮನ್ನಣೆಯಾಗಿದೆ ಎಂದು ಜಿ.ಪಂ. ಸದಸ್ಯ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ತಿಳಿಸಿದರು.

ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ದಲಿತ ಹಾಗೂ ಜಾತ್ಯಾತೀತ ಸೋಗಿನ ಮುಖವಾಡಗಳನ್ನು ಹಾಕಿಕೊಂಡು ಕೇವಲ ಮತಗಳಿಕೆಗೆ ಮಾತ್ರ ಸೀಮಿತವಾಗಿದೆ. ಆದರೆ ಬಿಜೆಪಿ ಪಕ್ಷ ದಲಿತರಿಗೆ ಹಲವು ಹುದ್ದೆಗಳಲ್ಲಿ ಸ್ಥಾನ ಮಾನಗಳಿಗೆ ಮನ್ನಣೆ ನೀಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನಕ್ಕೆ ಎನ್‍ಡಿಎ ಅಭ್ಯರ್ಥಿಯಾಗಿ ಸಂಭಾವಿತ ದಲಿತ ನಾಯಕ ರಾಮನಾಥ್ ಕೋವಿಂದ್‌ರವರನ್ನು ಆಯ್ಕೆ ಮಾಡಿರುವುದೇ ಆಗಿದೆ.  ಈ ಹಿಂದೆ ಭಾರತೀಯ ಜನತಾ ಪಕ್ಷದ ಅಟಲ್‍ಬಿಹಾರಿ ವಾಜಪೇಯಿ  ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಪಕ್ಷದಲ್ಲಿ ಇಲ್ಲದಿದ್ದರೂ ಅಲ್ಪಸಂಖಾತ ಮುಸ್ಲಿಂ ಜನಾಂಗದ ದೇಶದ ಮಹಾನ್ ವಿಜ್ಞಾನಿ ಹಾಗೂ ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾದ ಡಾ.ಎ.ಪಿ.ಜೆ.ಅಬ್ದಲ್‌ಕಲಾಂ ರವರ ಸೇವೆಗೆ ಮನ್ನಣೆ ನೀಡಿ ಎನ್‍ಡಿಎ ಅಭ್ಯರ್ಥಿಯಾಗಿ ಆಯ್ಕೆಮಾಡಿ ರಾಷ್ಟ್ರಪತಿಗಳನ್ನಾಗಿ ಮಾಡಿದ್ದರು. ಆದ್ದರಿಂದ ಬಿಜೆಪಿ ಪಕ್ಷವು ಹಲವು ವರ್ಷಗಳಿಂದ ದಲಿತ ಹಾಗೂ ಅಲ್ಪಸಂಖ್ಯಾತ ವ್ಯಕ್ತಿ ಹಾಗೂ ಜನರಿಗೆ ಸಾಕಷ್ಟು ಸ್ಥಾನಮಾನ ಹಾಗೂ ಮನ್ನಣೆಗಳನ್ನು ನೀಡುತ್ತಿದೆ. ಬೇರೆ ಪಕ್ಷಗಳಂತೆ ಅವರನ್ನು ಮತ ಬ್ಯಾಂಕ್‍ಗಳಾಗಿ ಮಾಡಿಕೊಂಡಿಲ್ಲ. ಇದರಿಂದ ಬಿಜೆಪಿಯ ದಲಿತ ನಾಯಕನಾದ ನಾನು ರಾಜ್ಯದ ಎಲ್ಲಾ ದಲಿತರ ಪರವಾಗಿ ಪ್ರಧಾನಿ ನರೇಂದ್ರ ಮೋದಿರವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪವನ್‍ಕುಮಾರ್, ಎಸ್‍ಟಿ ಮೋರ್ಚಾದ ವಿಜಯ್‍ಕುಮಾರ್, ಎಸ್ಸಿ ಮೋರ್ಚಾದ ಹನುಮಂತರಾಜು, ತಾಲೂಕು ಘಟಕದ ಚಂದ್ರಣ್ಣ, ಗುರುಪ್ರಸಾದ್, ಉಲ್ಲಾಸ್, ಪ್ರಕಾಶ್‍ರೆಡ್ಡಿ, ಬೋಗಣ್ಣ ಮತ್ತಿತರರು ಉಪಸ್ಥಿತರಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: