ಕರ್ನಾಟಕ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಗೆ ಕೆ.ಎಂ.ಗಣೇಶ್ ಒತ್ತಾಯ

ರಾಜ್ಯ(ಮಡಿಕೇರಿ) ಜೂ.24 :- ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಭಾರ ಅಧ್ಯಕ್ಷರು ಪಕ್ಷದೊಳಗೆ ಹಿಟ್ಲರ್‍ನಂತೆ ವರ್ತಿಸುತ್ತಿದ್ದು, ಪಕ್ಷ ವಿನಾಶದಂಚಿಗೆ ತಲುಪಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೀನಾಯ ಪರಿಸ್ಥಿತಿಯ ಹೊಣೆ ಹೊತ್ತು ಪ್ರಭಾರ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ತಮಗೆ ಅಧಿಕಾರ ಬೇಡ ಎಂದು ಹೇಳಿಕೊಳ್ಳುವ ಪ್ರಭಾರ ಅಧ್ಯಕ್ಷರು ತಮ್ಮನ್ನೇ ಖಾಯಂ ಅಧ್ಯಕ್ಷರನ್ನಾಗಿ ಮಾಡುವಂತೆ ಕೆಪಿಸಿಸಿ ಮೇಲೆ ಒತ್ತಡ ಹೇರಲು ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಕೆಲವು ಪದಾಧಿಕಾರಿಗಳ ನಕಲಿ ಸಹಿಯನ್ನು ಬಳಸಲಾಗಿದೆ ಎಂದು ಆರೋಪಿಸಿದರು. ತಾಕತ್ತಿದ್ದರೆ ಪ್ರಭಾರ ಅಧ್ಯಕ್ಷರು ನನ್ನನ್ನು ಪಕ್ಷದಿಂದ ಅಮಾನತು ಮಾಡಲಿ ಎಂದು ಸವಾಲೆಸೆದ ಕೆ.ಎಂ.ಗಣೇಶ್, ನಾನಿನ್ನೂ ಬ್ಲಾಕ್ ಅಧ್ಯಕ್ಷ ಸ್ಥಾನದಲ್ಲಿದ್ದರೂ ಜೂ.28 ರಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ನಡೆಸಲು ಜಿಲ್ಲಾ ಪ್ರಾರ ಅಧ್ಯಕ್ಷರು ಮುಂದಾಗಿದ್ದಾರೆ. ಈ ಸಭೆಯನ್ನು ನಡೆಸಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪ್ರಭಾರ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಗೌರವ ನೀಡದೆ ಹಿಟ್ಲರ್‍ನಂತೆ ವರ್ತಿಸುತ್ತಿದ್ದಾರೆ. ತನ್ನಿಂದಲೇ ಪಕ್ಷ ಎಂದು ಭಾವಿಸಿರುವ ಇವರಿಂದ ಅನೇಕ ಮಂದಿ ಬೇಸತ್ತಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕಾಗಿ ಎಲ್ಲರು ಸುಮ್ಮನಿದ್ದಾರೆ, ಅಧಿಕಾರ ಹೋದ ನಂತರ ಅಸಮಾಧಾನ ಸ್ಫೋಟಗೊಂಡು ನಮ್ಮ ಜೊತೆಯಲ್ಲಿ ಹಲವರು ಬರಲಿದ್ದಾರೆ ಎಂದು ಕೆ.ಎಂ.ಗಣೇಶ್ ತಿಳಿಸಿದರು.ಮುಂದಿನ ದಿನಗಳಲ್ಲಿ ಜಾತ್ಯಾತೀತ ನಾಯಕರೊಬ್ಬರ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದ ಅವರು, ಬಿಜೆಪಿಯಿಂದ ಹೊರತಾದ ಸಂಘಟನೆ ಬೆಳೆಯಲಿದೆ ಎಂದರು. ಜೂ.28 ರಂದು ನಡೆಯುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯ ನಂತರ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ ಗಣೇಶ್, ನಗರಸಭೆಯಲ್ಲಿ ಸದಸ್ಯರುಗಳಾದ ಲೀಲಾಶೇಷಮ್ಮ, ಶ್ರೀಮತಿ ಬಂಗೇರ, ವೀಣಾಕ್ಷಿ ಹಾಗೂ ತಾವು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಲೀಲಾಶೇಷಮ್ಮ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಕಾರ್ಯದರ್ಶಿ ಸುಕೇಶ್ ಚಂಗಪ್ಪ, ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಸುನೀಲ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಸದಸ್ಯರಾದ ಕರೀಂ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: