ಕರ್ನಾಟಕಪ್ರಮುಖ ಸುದ್ದಿ

ನಮಗೆ ಕಷ್ಟವಿದೆ..ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ..ನಾಗರಹೊಳೆ ಗದ್ದೆಹಾಡಿ ಬುಡಕಟ್ಟುಜನಾಂಗದ ಗೋಳು

ರಾಜ್ಯ(ಮಡಿಕೇರಿ)ಜೂ.25:- ಚೆಟ್ಟಳ್ಳಿಗೆ ಸಮೀಪದ  ರಾಜೀವ್‍ಗಾಂಧಿ ರಾಷ್ಟ್ರೀಯಉದ್ಯಾನ ವೆಂದು ಗುರುತಿಸ್ಪಟ್ಟಿರುವ ನಾಗರಹೊಳೆ ಮೀಸಲು ಅರಣ್ಯದ ಗದ್ದೆ ಹಾಡಿಯ ಮೂಲ ಬುಡಕಟ್ಟು ಜನಾಂಗದ್ದು ಗೋಳಿನದೇ ಕಥೆಯಾಗಿದೆ..!

ಕಾಡಿನ ಮಕ್ಕಳ ಅರಣ್ಯದೊಳಗೆ ನೋವಿನ ಕೂಗು ಯಾರಿಗೂ ಕೇಳುತ್ತಿಲ್ಲ. ಸುಮಾರು ಎಂಟನೇ ಶತಮಾನಗಳಿಂದ ನಮ್ಮ ಅಜ್ಜಮುತ್ತಜ್ಜರು ಅರಣ್ಯದೊಳಗೆ ಗುಂಪಾಗಿ ಬಿಸಿಲಮಳೆ ಚಳಿಗಾಳಿಗೆ ಮೈಯೊಡ್ಡುವಷ್ಟೇ ಸೂರು ಕಟ್ಟಿಕೊಂಡು ಅರಣ್ಯವೇ ನಮ್ಮ ಸಾಮ್ರಾಜ್ಯವೆಂದು ಬದುಕುತಿದ್ದ ಹಾಡಿಗರನ್ನು ಇಂದು ಅರಣ್ಯದಿಂದ ಎತ್ತಂಗಡಿ ಮಾಡಲು ಅರಣ್ಯಇಲಾಖೆ ಪರಿಶ್ರಮದೊಂದಿಗೆ ನಿರಂತರ ತೊಂದರೆ ನೀಡುತ್ತಿದೆ ಎಂದು ಇಲ್ಲಿನ ಮೂಲ ಆದಿವಾಸಿ ಬುಡಕಟ್ಟು ಜನಾಂಗದವರು ಅಳಲು ತೋಡಿಕೊಂಡಿದ್ದಾರೆ.  ನಂಗ ಬಹಳ ಕಷ್ಟಲ್ ಇದ್ದೇಗೆ.. ನಂಗನೇ ನೆಮ್ಮದಿಂದ ಬದ್‍ಕಲ್ ಬುಡದಾನು (ನಮಗೆ ಬಹಳ ಕಷ್ಟವಿದೆ. ನಮಗೆ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ) ಎಂಬ ನೋವನ್ನು ತಮ್ಮ ಜನಾಂಗೀಯ ಭಾಷೆಯಲ್ಲಿ ತೋಡಿಕೊಳ್ಳುತಿದ್ದಾರೆ.

ನಾಗರಹೊಳೆಯ ಕಾಡಿನೊಳಗಿರುವ ಕುಂತುರು ಕೋಟೆಯ ಜಾಗದಲ್ಲೇ ಜೇನುಕುರುಬ ಬುಡಕಟ್ಟು ಜನಾಂಗ ಶತಮಾನಗಳಿಂದ ತಮ್ಮ ಮೂಲಸ್ಥಾನವಾಗಿ ಹಾಡಿಕಟ್ಟಿ ಬದುಕುತ್ತಿದ್ದು 1977ರ ನಂತರದಲ್ಲಿ ಅಲ್ಲಿಂದ ಈಗಿರುವ ಜಾಗಕ್ಕೆ ನಮ್ಮೆಲ್ಲರನ್ನು ಕರೆತಂದು ರಸ್ತೆ ಬದಿಯ ಜಾಗದಲೇ ಇರುವಂತೆ ಸೂಚಿಸಿದರು. ಅರಣ್ಯದೊಳಗಿನ ಬಿದಿರು, ಹುಲ್ಲು,ಕಡ್ಡಿ ಮಣ್ಣಿನಿಂದ ಸಾರಿಸಿದ ಗುಡಿಸಲೇ ಆಶ್ರಯ ತಾಣವಾಗಿದೆ. ಕುಡಿಯಲು ನೀರಿಲ್ಲದೆ ಪಕ್ಕದಲೇ ಗುಂಡಿ ತೋಡಿ ಕೆಸರಿನ ನೀರನ್ನೇ ಕುಡಿದು ಬದುಕುವ ಪರಿಸ್ಥಿತಿಯಾಗಿದೆ.  ಕೆಲವು ಸಮಯದ ಹಿಂದೆ ವೀರಾಜಪೇಟೆ ತಾಲೂಕಿನ ಹಾಡಿನ ಸರ್ವೆ ಸಂದರ್ಭ ನಾಲ್ಕೇರಿಯ ತಟ್ಟೆಕೆರೆ, ತಿತಿಮತಿಯ ಮಜ್ಜಿಗೆ ಹಳ್ಳ, ಆಯಿರ ಸುಳಿ, ಜಂಗಲ್ ಹಾಡಿ, ಚೀಣಿ ಹಡ್ಲು, ಬೊಂಬು ಕಾಡು, ಮಜ್ಜಿಗೆಹಳ್ಳ, ಕಾರೆಕಂಡಿ, ಗೋಣಿಗದ್ದೆ, ನಾಣಚ್ಚಿ ಗದ್ದೆ, ಬಾಳೆಕೋವು, ಸಿದ್ದಾಪುರ, ಕೊಡಂಗೆರಿ ಗಳಂತಹ ಹತ್ತು ಹಲವು ಹಾಡಿಗಳ ಸರ್ವೆಕಾರ್ಯ ನಡೆಸಿದ್ದರ ಜೊತೆ 279ಏಕರೆ ಜಾಗ ಹಾಗು 48 ಕುಟುಂಬವಿರುವ ನಾಗರಹೊಳೆ ಹಾಡಿ ಸರ್ವೆಕಾರ್ಯ ನಡೆಸಿ ವರದಿಯನ್ನು ತಯಾರಿಸಲಾಯಿತಾದರೂ ಈವರೆಗೆ ಹಕ್ಕು ಪತ್ರ ನೀಡಲೇ ಇಲ್ಲ, ಕೆಲವರಿಗೆ ಕೇವಲ 0.05 ಸೆಂಟ್ಸ್  ಜಾಗವನ್ನು ನೀಡಲು ತೀರ್ಮಾನಿಸಿದ್ದಾರೆ ಅಷ್ಟರಲ್ಲಿ ನಮ್ಮ ಬದುಕು ಕಟ್ಟಲು ಹೇಗೆ ಸಾಧ್ಯ ಎನ್ನುತ್ತಾರೆ. ನಮ್ಮನೆಲ್ಲ ಇಲ್ಲಿಂದ ಎತ್ತಂಗಡಿ ಮಾಡಲು ಅರಣ್ಯ ಇಲಾಖೆ ಹಲವು ಅಧಿಕಾರಿ ವರ್ಗ ಹಾಗೂ ಪರಿಸರವಾದಿಗಳೆನಿಸಿಕೊಂಡವರು ನಮ್ಮೆನ್ನೆಲ್ಲ ಹಿಂಸಿಸುತ್ತಿದ್ದರೆ ನಾವು  ಈ ಕಾಡು ಬಿಟ್ಟು ಎಲ್ಲೂ ಹೋಗಲ್ಲ, ಕಾಡೇ ನಮ್ಮ ಜೀವ ನಮ್ಮ ಸಂಪ್ರದಾಯದ ಆರಾಧನೆಗಳೆಲ್ಲ ಇರುವುದೇ ಇಲ್ಲಿ,ನಮಗೆಲ್ಲ ಔಷಧೋಪಚಾರ ನೀಡುವುದೇ ಈ ಅರಣ್ಯ. ನಮ್ಮ ಪಾರಂಪರಿಕ ಹಕ್ಕಿಗಾಗಿ 1996ರಿಂದಲೇ ಹೋರಾಟ ಮಾಡುತ್ತಿದ್ದೇವೆ. 2000ಕಾಯಿದೆಯ ಹಕ್ಕಿನಡಿ ನಮಗೆ ಬದುಕುವ ಹಕ್ಕು ನೀಡಬೇಕೆಂದು ನಾಗರ ಹೊಳೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಕೆ.ತಿಮ್ಮ ಹೇಳಿದರು.
ಮನೆಕಟ್ಟಲ್ ಬಿಡದಿಲ್ಲೆ..ವ್ಯವಸಾಯಕ್ ಬಿಡದಿಲೆ..ಸೌದೆ ತರಾಕ್ ಬಿಡದಿಲೆ…(ಮನೆಕಟ್ಟಲು, ವ್ಯವಸಾಯಮಾಡಲು, ಸೌದೆ ತರಲು ಬಿಡುತ್ತಿಲ್ಲ)

ನಮಗೆ ಮನೆಕಟ್ಟಬೇಕೆಂದರೂ ಇಲ್ಲಿ ಬಿಡುವುದಿಲ್ಲ, ವ್ಯವಸಾಯ ಮಾಡುವುದಕ್ಕೂ ಬಿಡುವುದಿಲ್ಲ, ಕಾಡಿನಿಂದ ಸೌದೆತರಲಿಕ್ಕೂ ಬಿಡದೆ ಬಂಡಾಟ ಬದುಕಿನ ಸ್ಥಿತಿ ನಮ್ಮದಾಗಿದೆ. ತಾತ್ಕಾಲಿಕ ಬಿದಿರಿನಿಂದ ಕಟ್ಟುವ ಸೂರೆಲ್ಲ ಮುರಿದು ಮೇಲಿನ ಚಾವಣಿ ಬೀಳುವಂತ ಪರಿಸ್ಥಿತಿ ಒಂದೆಡೆಯಾದರೆ ಮಣ್ಣಿನಿಂದ ಮಾಡಿದ ಮನೆಯ ಗೋಡೆಗಳೆಲ್ಲ ಕುಸಿದು ಹೋಗಿ ಸೀರೆಯ ತುಂಡುಗಳೇ ಇಲ್ಲಿ ಸೂರಿನಗೋಡೆಗಳಾಗಿವೆ. ಸರಕಾರ ಅಕ್ಕಿ,ಮೊಟ್ಟೆ,ಬೇಳೆ,ಸಕ್ಕರೆ,ಸೀಮೆಣ್ಣೆ ನೀಡಿತ್ತಿದ್ದರೂ ನೆಮ್ಮದಿಯ ಬದುಕಿಲ್ಲ, ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಸೋರುತಿರುವ ಸೂರಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ನೀಡಿದರೂ ಪ್ರಯೋಜನವಾಗಿಲ್ಲ.
ನಾಯಕ ತಿಮ್ಮನ ಮೇಲೆ ಹಲವು ಮೊಕದ್ದಮೆ
ನಾಗರ ಹೊಳೆ ಗದ್ದೆ ಹಾಡಿ ಬುಡಕಟ್ಟು ಕೃಷಿಕರ ಸಂಘದ ನಾಯಕ ನೆನಿಸಿಕೊಂಡ ಅಧ್ಯಕ್ಷ ಜೆ.ಕೆ.ತಿಮ್ಮ ತಮ್ಮ ಪಾರಂಪರಿಕ ಮೂಲನೆಲೆಯ ಹಕ್ಕಿಗಾಗಿ ಹೋರಾಟ ನಡೆಸಿದ್ದರ ಫಲವಾಗಿ ವನ್ಯಜೀವಿ ಸಂಕರಕ್ಷಣಾ ಕಾಯಿದೆ,ಅರಣ್ಯ ಕಾಯಿದೆಯಡಿ 11 ಸೆಕ್ಷನ್ನು ಜಡಿಯಲಾಗಿದ್ದು ಪೊನ್ನಂಪೇಟೆಯ ನ್ಯಾಯಾಲಯದಲ್ಲಿ ಕೇಸಿನೊಂದಿಗೆ ಅಲಿಯುತ್ತಿದ್ದಾರೆ. ನಿಮಗೆ ಈ ಜಾಗ ಸಿಗುವುದಿಲ್ಲ ನಿಮಗೆ ಹಣ ನೀಡುತ್ತೇವೆ,ಒಳ್ಳೆಯ ಸೂರುಕಟ್ಟಿಕೊಡುತ್ತೇವೆ ಎಂಬ ಆಮಿಶ ಒಡ್ಡಿ ಒತ್ತಾಯ ಪೂರ್ವಕವಾಗಿ ಹಲವು ಪತ್ರದಲ್ಲಿ ನಾವೇ ಒಪ್ಪಿ ಅರಣ್ಯದಿಂದ ತೆರಳಿದ ಹಾಗೆಲ್ಲ ಅವರೇ ಬರೆದು ಬಾಂಡ್ ಪೇಪರಿನಲ್ಲಿ ಒತ್ತಾಯವಾಗಿ ಸಹಿ ಮಾಡಿಸಿ ಎತ್ತಂಡಿ ನಡೆಸಲು ತೀರ್ಮಾನಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಚುನಾವಣೆಯ ಸಮಯದಲ್ಲಿ ಓಟಿಗಾಗಿ ಬಂದು ಭರವಸೆಯ ಗೋಪುರವನ್ನೇ ಕಟ್ಟಿ ಹಣ, ಹೆಂಡ ಹಂಚಿ ಓಟು ಪಡೆದವರು ಗದ್ದುಗೆ ಏರಿದ ಮೇಲೆ ಇತ್ತ ತಿರುಗಿ ಬರಲೇ ಇಲ್ಲವೆನ್ನುತ್ತಾರೆ ಇಲ್ಲಿನ ಮಂದಿ.

ಈ ಮಣ್ಣಲ್…ಈ ನೆಲಲ್… ಬದ್‍ಕಲ್ ಅವಕಾಶ ಮಾಡಿಕೊಡಲಿ, ಇಲಂದ್ರೆ.. ನಾವ್ ನಂಬಿದ ದೇವರ್ ನಿಮ್ಮ್‍ನ ಸುಮನೆ ಬಿಡಾದ್…(ಈ ಮಣ್ಣಿನ ಈ ನೆಲದಲ್ಲಿ  ಬದುಕಲಿಕ್ಕೆ ಅವಕಾಶ ಮಾಡಿಕೊಡಲಿ. ಇಲ್ಲದಿದ್ದಲ್ಲಿ ನಾವು ನಂಬಿದ ದೇವರು ನಿಮ್ಮನ್ನು ಸುಮ್ಮನೆ ಬಿಡುವಿದಿಲ್ಲ)ಎಂದು ನೋವಿನ ಹಿಡಿಶಾಪ ಹಾಕುತಿದ್ದಾರೆ. (ಕೆ.ಸಿ.ಐ,ಎಸ್.ಎಚ್)

Leave a Reply

comments

Related Articles

error: