ಕರ್ನಾಟಕ

ರೈತರು ನೀರನ್ನು ಮಿತವಾಗಿ ಬಳಸಬೇಕು : ಬಿ.ಎಲ್.ದೇವರಾಜು

ರಾಜ್ಯ(ಮಂಡ್ಯ)ಜೂ.26:-  ರೈತರು ನೀರನ್ನು ಮಿತವಾಗಿ ಬಳಸಬೇಕು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಹೆಚ್ಚು ಬೆಳೆಯಬೇಕು. ತುಂತುರು ಮತ್ತು ಹನಿ ನೀರಾವರಿ ಬಳಕೆಯಿಂದ ನೀರನ್ನು ಮಿತವಾಗಿ ಬಳಸಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ವಿಶ್ವ ಮಹಾಯುದ್ದ ನಡೆದರೂ ಆಶ್ಚರ್ಯಪಡಬೇಕಾಗಿಲ್ಲ.  ನೀರಿಗೆ ಅಷ್ಟೊಂದು ಮಹತ್ವ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಹೇಳಿದರು.
ಅವರು ಕೆ.ಆರ್.ಪೇಟೆ ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರದಿಂದ ಹೋಬಳಿಯಾದ್ಯಂತ ಗ್ರಾಮ ಪರ್ಯಟನೆಗೆ ಹೊರಟ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರಕಾರದ ವತಿಯಿಂದ 2017-18 ರಲ್ಲಿ ಜಲಜಾಗೃತಿ ವರ್ಷಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಿಂದಲಾದರೂ ನೀರು ಉಳಿಸುವ ಬಗ್ಗೆ ನಾವು ಚಿಂತನೆ ನಡೆಸಬೇಕು. ರೈತರು ಕಡಿಮೆ ನೀರಿನ ಅವಶ್ಯಕತೆಯ ಜಮೀನಿನಲ್ಲಿ ಸಿರಿಧಾನ್ಯ ಉತ್ಪನ್ನಗಳನ್ನು ಬೆಳೆದು ಆರ್ಥಿಕವಾಗಿ ಹೆಚ್ಚು ಲಾಭವನ್ನು ಗಳಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು. ಕೃಷಿ ಚಟುವಟಿಕೆಗಳಿಂದಲೂ ಲಾಭ ಗಳಿಸಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಬೇಕು. ಗ್ರಾಮೀಣ ಪ್ರದೇಶದ ರೈತರು ತಮ್ಮ ಭೂಮಿಯ ಮಣ್ಣನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಮಣ್ಣು ಪರೀಕ್ಷೆಯನ್ನು ಕೃಷಿ ಇಲಾಖೆಯು ಉಚಿತವಾಗಿ ಮಾಡಿಕೊಡುತ್ತಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮಣ್ಣು ಪರೀಕ್ಷೆ ಫಲಿತಾಂಶ ಧೃಢೀಕರಣ ಪತ್ರವನ್ನು ಪಡೆದ ನಂತರ ಕೃಷಿ ತಜ್ಞರ ಸಲಹೆ ಪಡೆದು ತಮ್ಮ ಮಣ್ಣಿನ ಗುಣಕ್ಕೆ ಅನುಗುಣವಾಗಿ, ತಮ್ಮ ಭೂಮಿಯ ಮಣ್ಣಿನ ಗುಣಕ್ಕೆ ಅನುಗುಣವಾಗಿ  ಬೆಳೆಗಳನ್ನು ಬೆಳೆಯಬೇಕು. ರೈತರ ಮನೆ ಬಾಗಿಲಿನಲ್ಲಿ ಕೃಷಿ ಸಂಬಂಧಪಟ್ಟ ಇಲಾಖೆಗಳ ಮಾಹಿತಿ ಸಿಗಲಿ ಎಂಬ ಸದುದ್ದೇಶದಿಂದ ಕೃಷಿ, ತೋಟಗಾರಿಕೆ, ಕಂದಾಯ, ಶಿಕ್ಷಣ, ಪಶುಸಂಗೋಪನೆ, ಮೀನುಗಾರಿಕೆ, ಆರೋಗ್ಯ, ರೇಷ್ಮೆ ಸೇರಿದಂತೆ ರೈತನಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಳ್ಳಿ-ಹಳ್ಳಿಗಳಿಗೆ ತೆರಳಿ, ತಮ್ಮ ಇಲಾಖೆಗಳ ಮೂಲಕ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಿದ್ದಾರೆ. ಹಾಗಾಗಿ ರೈತರು ಕಡ್ಡಾಯವಾಗಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು  ಮನವಿ ಮಾಡಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಜಾನಕೀರಾಂ ಮಾತನಾಡಿ ಇಂದಿನ ಭೀಕರವಾದ ಬರದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತಹ ಉಪ ಕಸುಬುಗಳಾದ ಕುರಿ, ಮೇಕೆ, ಕೋಳಿ ಸಾಕಾಣಿಕೆ, ರೇಷ್ಮೆ, ಅಣಬೆ ಬೇಸಾಯ, ಹೈನುಗಾರಿಕೆ ಮತ್ತಿತರರ ಕಸಬುಗಳನ್ನು ಕೈಗೊಂಡು ಬರಗಾಲವನ್ನು ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಸದಸ್ಯರಾದ ನಿಂಗೇಗೌಡ, ವಿನೂತ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಜೆ.ಕುಮಾರ್, ಲೋಹಿತ್, ಕೃಷಿಕ ಸಮಾಜದ ನಿರ್ದೇಶಕರಾದ ಎಸ್.ಟಿ.ಜಯರಾಂ, ಲಕ್ಷ್ಮಣ್‍ಗೌಡ, ಕೃಷಿ ಅಧಿಕಾರಿ ಆನಂದ್‍ಕುಮಾರ್, ಸಹಾಯಕ ಕೃಷಿ ಅಧಿಕಾರಿ ನಾಗರಾಜ್, ಜಯಶಂಕರ್ ಆರಾಧ್ಯ, ತೋಟಗಾರಿಕೆ ಅಧಿಕಾರಿ ಜಯರಾಮು, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: