ಕರ್ನಾಟಕ

ಅಸ್ಪೃಶ್ಯರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಅವರ ಸಮಗ್ರ ಅಭಿವೃದ್ಧಿ ಸಾಧ್ಯ : ಸಿ.ಎಂ.ಕೃಷ್ಣ

ರಾಜ್ಯ(ಮಂಡ್ಯ)ಜೂ.26:-  ಅಸ್ಪೃಶ್ಯರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಅವರ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದು ಅಂಬೇಡ್ಕರ್ ಅವರ ಸಿದ್ದಾಂತವಾಗಿತ್ತು. ಈ ಆಶಯವನ್ನು ಈಡೇರಿಸುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಪಾರ್ಟಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕನಿಷ್ಠ 150ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಂ.ಕೃಷ್ಣ ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಪಾರ್ಟಿಯ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಹೊಸಹೊಳಲು ಸುಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಕೇವಲ ಅಸ್ಪೃಶ್ಯರಿಗೆ ಮಾತ್ರ ಮೀಸಲಾತಿ ನೀಡಲಿಲ್ಲ. ಬದಲಾಗಿ ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಈ ಮೀಸಲಾತಿಯ ದುರುಪಯೋಗ ನಡೆಯುತ್ತಿದೆ. ರಾಜಕಾರಣಿಗಳು ತಮ್ಮ ಓಟಿನ ಆಸೆಗಾಗಿ ಸ್ಪೃಶ್ಯ ವರ್ಗದವರನ್ನು ಎಸ್.ಸಿ.ಎಸ್.ಟಿ. ಮೀಸಲಾತಿ ವರ್ಗಕ್ಕೆ ಸೇರಿಸುವ ಮೂಲಕ ದಲಿತ ವರ್ಗದವರ ಅವಕಾಶಗಳನ್ನು ಕಸಿಯುತ್ತಿದ್ದಾರೆ. ಇದರಿಂದಾಗಿ ಅಸ್ಪೃಶ್ಯರು(ದಲಿತರು) ಸೂಕ್ತ ಮೀಸಲಾತಿ ಸಿಗದೇ ಸ್ವಾಂತಂತ್ರ್ಯ ಬಂದು 70ವರ್ಷಗಳಾದರೂ ಹಿಂದುಳಿದೇ ಇದ್ದಾರೆ. ಮೀಸಲಾತಿ ಕ್ಷೇತ್ರಗಳಲ್ಲಿ ಗೆದ್ದು ಹೋದ ಬೇರೆ ಪಕ್ಷದ ದಲಿತರು ದಲಿತರು ಅಥವಾ ಅಸ್ಪೃಶ್ಯರ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಅಲ್ಲದೆ ಆ ಪಕ್ಷಗಳಲ್ಲಿ ಅವರು ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ದಲಿತರನ್ನು ರಾಜಕಾರಣಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದಲಿತರ ಎಡಗೈ ವರ್ಗದವರನ್ನು ಬಲಗೈನವರ ಮೇಲೆ, ಬಲಗೈ ವರ್ಗದವರನ್ನು ಎಡಗೈನವರ ಮೇಲೆ ಎತ್ತಿಕಟ್ಟುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಇದನ್ನು ನಮ್ಮ ದಲಿತ ಬಂಧುಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಪಾರ್ಟಿಯಿಂದ ಕನಿಷ್ಠ 150 ಸಾಮಾನ್ಯ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಎಸ್.ಸಿ.ಎಸ್.ಟಿ ಮೀಸಲು ಕ್ಷೇತ್ರಗಳಲ್ಲಿ ನಮ್ಮ ಎಪಿಪಿ ಪಕ್ಷಕ್ಕೆ ಸಾಮ್ಯತೆ ಇರುವ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾ ಅಂಬೇಡ್ಕರ್ ಪೀಪಲ್ ಪಾರ್ಟಿ ಅಧ್ಯಕ್ಷ ಹನಕೆರೆ ಗಂಗರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಜಿಲ್ಲಾ ನೂತನ ಯುವ ಘಟಕದ ಅಧ್ಯಕ್ಷ ಹೊಸಹೊಳಲು ಸುಕುಮಾರ್, ನಿವೃತ್ತ ಶಿಕ್ಷಕ ಭದ್ರಯ್ಯ, ಬಿ.ಬಿ.ಕಾವಲು ಈರಯ್ಯ, ಪಾಂಡವಪುರ ವೆಂಕಟೇಶ್, ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

comments

Related Articles

error: