ಕರ್ನಾಟಕ

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ರಾಜ್ಯ(ಮಡಿಕೇರಿ)ಜೂ.26:- ಜಿಲ್ಲೆಯಾದ್ಯಂತ ಮುಸಲ್ಮಾನ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಿಧ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಜರುಗಿತು.

ಮಡಿಕೇರಿ ನಗರದ ಬದ್ರಿಯಾ ಮಸೀದಿ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಶಾಂತಿ, ಸೌಹಾರ್ದತೆಗಾಗಿ ಧರ್ಮಗುರುಗಳು ಇದೇ ಸಂದರ್ಭ ಸಂದೇಶ ನೀಡಿದರು. ಬಡವರಿಗೆ ದಾನ ಮಾಡಿ, ಸ್ನೇಹಿತರಿಗೆ ವಿಶೇಷ ಖಾದ್ಯಗಳನ್ನು ನೀಡಿ ಮುಸಲ್ಮಾನರು ಹಬ್ಬವನ್ನು ಸಂಭ್ರಮಿಸಿದರು. ಮೂವತ್ತು ದಿನಗಳ ಉಪವಾಸ ವ್ರತದ ಪರಿಸಮಾಪ್ತಿ ಎಂಬಂತೆ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ವಿರಾಜಪೇಟೆಯಲ್ಲಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ಪ್ರತಿಕೂಲವಾದ ಮಳೆಯ ವಾತಾವರಣದ ಹೊರತಾಗಿಯೂ ನಗರದ ಎಲ್ಲಾ ಮಸೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಜರುಗಿತು.

ವಿರಾಜಪೇಟೆ ಪಟ್ಟಣದ ಮುಖ್ಯ ಬೀದಿಯ ಶಾಫೀ ಜುಮಾ ಮಸೀದಿಯಲ್ಲಿ ಮೌ.ಖಲೀಲ್ ಇರ್ಫಾನಿ, ಖಾಸಗಿ ಬಸುನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ನೌಷಾದ್ ದಾರಿಮಿ, ಗೋಣಿಕೊಪ್ಪ ರಸ್ತೆಯ ಇಮಾಮ್ ಮುಸ್ಲಿಂ ಜುಮಾ ಮಸೀದಿಯಲ್ಲಿ ಮೌ.ಇಬ್ರಾಹೀಂ ಮೌಲವಿ ಬಾಖವಿ, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ.ಅಬೂ ಉಸಾಮಾ, ಮಲಬಾರ್ ರಸ್ತೆಯ ಸಲಫಿ ಮಸೀದಿಯಲ್ಲಿ ಮುನೀರ್ ಸ್ವಲಾಹಿ, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಮೌ. ಸಿರಾಜ್ ಅಹಮದ್ ಸಾಹೆಬ್, ಅಪ್ಪಯ್ಯ ಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ. ಮರ್‍ಗೂಬ್ ಆಲಂ, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ.ಮುಝಮಿಲ್, ಪೆರಂಬಾಡಿಯ ಖಿಳರಿಯಾ ಮಸೀದಿಯಲ್ಲಿ ಮೌ.ಹ್ಯಾರಿಸ್ ಬಾಖವಿ, ಗಡಿಯಾರ ಕಂಬದ ಬಳಿಯ ಬಾದ್‍ಷಾ ಮಸೀದಿಯಲ್ಲಿ ಮೌ.ಮಖ್‍ಸೂದ್ ಸಾಬ್ ಈದ್ ವಿಶೇಷ ನಮಾಜ್ ಹಾಗೂ ಪ್ರವಚನಕ್ಕೆನೇತೃತ್ವ ವಹಿಸಿದ್ದರು.

ನಮಾಜ್ ಹಾಗೂ ಪ್ರವಚನದ ನಂತರ ಸಮುದಾಯ ಬಾಂಧವರು ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಖಬರಸ್ಥಾನಕ್ಕೆ ತೆರಳಿ ಹಿರಿಯರಿಗೆ ಗೌರವ ಸಲ್ಲಿಸಿದರು. ನಗರದ ಹನಫಿ ಹಾಗೂ ಶಾಫಿ ಮುಸಲ್ಮಾನರು ಒಂದೇ ದಿನ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: