ಕರ್ನಾಟಕ

ನಿಸರ್ಗ ಸಹಜವಾಗಿ ಇದ್ದರೆ ನಮಗೆ ಕೊರತೆಯೂ ಕಾಡದು : ರಾಮಕೃಷ್ಣಪ್ಪ

ರಾಜ್ಯ(ತುಮಕೂರು)ಜೂ.26:-ನಾವು ನಿಸರ್ಗದ ಕೂಸುಗಳು. ನಮ್ಮ ಬದುಕು ನಿಸರ್ಗ ಸಹಜವಾಗಿ ಇದ್ದರೆ ನಮಗೆ ಯಾವ ಕೊರತೆಯೂ ಕಾಡದು ಎಂದು ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.
ಹುಳಿಯಾರು ಹೋಬಳಿಯ ದಸೂಡಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ವನಸಿರಿ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ “ಜಲವೇ ಜೀವನ” ಅಭಿಯಾನ ಯೋಜನೆಯಡಿ ಸಂವಾದ ನಡೆಸಿ ಅವರು ಮಾತನಾಡಿದರು. ಕಾಡಿನ ಮರಗಳನ್ನು ಕಡಿದು ನಮ್ಮ ಊರಿನದಲ್ಲದ ತೆಂಗಿನ ಮರ ಬೆಳೆಸಿದ್ದೇವೆ. ಹಸಿರು ತುಂಬಿದ ಗುಡ್ಡ-ಬೆಟ್ಟಗಳನ್ನು ಬೋಳು ಮಾಡಿದ್ದೇವೆ. ಹಸಿರು ಬೇಲಿ ತೆಗೆದು ಹಾಕಿದ್ದೇವೆ. ಸಾಂಪ್ರದಾಯಿಕ ಕೃಷಿ ಕೈಬಿಟ್ಟು ವಿಷ ತುಂಬಿದ ರಾಸಾಯನಿಕ ಗೊಬ್ಬರದಿಂದ ತಯಾರಾದ ಆಹಾರ ನಂಬಿದ್ದೇವೆ. ಭೋಗದ ಆಧುನಿಕ ಜೀವನ ಶೈಲಿ ಹಿಂದೆ ಓ‌ಡುತ್ತಿದ್ದೇವೆ. ಈ ರೀತಿಯ ಬದುಕಿನ ರೀತಿ ನೀರು ಸೇರಿದಂತೆ ಎಲ್ಲಾ ಸಂಪನ್ಮೂಲಗಳ ಬರ ಕಾಡುತ್ತಿದೆ. ಆದ್ದರಿಂದ ನಾವು ಪ್ರಕೃತಿ ಪೂರಕ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಅರಣ್ಯ ವೀಕ್ಷಕ ಸಂತೋಷ್ ಮಾತನಾಡಿ, ಮಾನವನ ಅರಣ್ಯ ಒತ್ತುವರಿ ಹಾಗೂ ಕಾಡಿಗೆ ಬೆಂಕಿಯಿಡುವ ಕೆಲಸದಿಂದ ಪರಿಸರ ನಾಶವಾಗಿದೆ. ನಮ್ಮ ಹಿಂದಿನ ಜನಾಂಗ ಮಾಡಿದ ತಪ್ಪನ್ನು ನಾವು ಮಾಡದೆ ಅವರಲ್ಲಿ ಈ ಬಗ್ಗೆ ಪ್ರಜ್ಞೆ ಮೂಡಿಸುವ ಕೆಲಸ ಇಂದಿನ ಯುವ ಜನಾಂಗದ ಮೇಲಿದೆ ಎಂದರು. ದಸೂಡಿ ಸುತ್ತಮುತ್ತಲ ಭಾಗದಲ್ಲಿ ಸಾಕಷ್ಟು ಬೆಟ್ಟಗುಡ್ಡಗಳಿವೆ. ಅರೆ ತಿಳಿವಳಿಕೆಯಿಂದ ಕಾಡಿಗೆ ಬೆಂಕಿ ಹಚ್ಚಲಾಗುತ್ತದೆ. ಅದರ ಮುಂದಿನ ಪರಿಣಾಮ ತಪ್ಪಿಸಲು ವಿದ್ಯಾರ್ಥಿಗಳು ಪೋಷಕರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಗಿರೀಶ್, ಚಾಲುಕ್ಯ ಯುವ ಶಕ್ತಿ ಟ್ರಸ್ಟ್‌ನ ಹನುಮೇಶ್, ರಮೇಶ್. ಅರಣ್ಯ ಇಲಾಖೆಯ ಬಸವರಾಜ್, ಪತ್ರಕರ್ತ ಆರ್.ಸಿ.ಮಹೇಶ್, ಸುವರ್ಣ ವಿದ್ಯಾ ಚೇತನದ ಗುರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: