ದೇಶಪ್ರಮುಖ ಸುದ್ದಿ

ಮುಂದಿನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್?

ನವದೆಹಲಿ, ಜೂನ್ 27 : ಸಂವಿಧಾನ ತಜ್ಞ ಮತ್ತು ಹಿರಿಯ ನ್ಯಾಯವಾದಿ ಕೆ.ಕೆ. ವೇಣುಗೋಪಾಲ್ ಅವರು ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹಾಲಿ ಅಟಾರ್ನಿ ಜನರಲ್ ಆಗಿರುವ ಮುಕುಲ್ ರೋಹ್ಟಗಿ ಮತ್ತೊಂದು ಅವಧಿಗೆ ಮುಂದುವರಿಯಲು ನಿರಾಕರಿಸಿರುವುದರಿಂದ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನೇಮಿಸಲು ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದ್ದು, ಹಲವು ಸುತ್ತಿನ ಮಾತುಕತೆಗಳ ನಂತರ ಹಿರಿಯರಾದ 86 ವರ್ಷ ವಯಸ್ಸಿನ ವೇಣುಗೋಪಾಲ್ ಅವರ ನೇಮಕಕ್ಕೆ ಸರಕಾರ ಚಿಂತನೆ ನಡೆಸಿದೆ.

ವೇಣುಗೋಪಾಲ್ ಅವರು ಹಲವು ವಿಷಯಗಳ ಮೇಲೆ ಅಪಾರ ಜ್ಞಾನ ಹೊಂದಿದ್ದಾರೆ. ಈ ದೃಷ್ಟಿಯಿಂದ ಅವರ ಜ್ಞಾನ ಮತ್ತು ಅನುಭವವನ್ನು ಪರಿಗಣಿಸಿ ಅವರರನ್ನೇ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 1960 ರಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಲು ಆರಂಭಿಸಿದ ವೇಣುಗೋಪಾಲ್ ಅವರು, 50ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.

ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದಾಗ ಚೆನ್ನೈನಲ್ಲಿ ವಾಸವಿದ್ದ ವೇಣುಗೋಪಾಲ್ ಅವರು, ಮೊರಾರ್ಜಿಯವರ ಆಹ್ವಾನವನ್ನು ಒಪ್ಪಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡು ದೆಹಲಿಗೆ ತಮ್ಮ ನಿವಾಸವನ್ನು ವರ್ಗಾಯಿಸಿದ್ದರು.

-ಎನ್.ಬಿ.

Leave a Reply

comments

Related Articles

error: