ಮೈಸೂರು

ಕೆಂಪೇಗೌಡರು ಬೆಂಗಳೂರನ್ನು ದಶದಿಕ್ಕುಗಳಿಗೂ ವಿಸ್ತರಿಸಿದರು: ನಾಗಣ್ಣ

ಮೈಸೂರು, ಜೂ.27: ದಶದಿಕ್ಕುಗಳಿಗೂ ಬೆಂಗಳೂರನ್ನು ವಿಸ್ತರಿಸಿ, ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಸಾಹಿತಿ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ವತಿಯಿಂದ ಮಂಗಳವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಯಲಹಂಕ ಸಾಮ್ರಾಜ್ಯ ಅತ್ಯಂತ ವಿಸ್ತಾರ ಹಾಗೂ ಪ್ರಬಲವಾದುದಾಗಿದ್ದು ಅಪಾರ ಕೊಡುಗೆಗಳನ್ನು ನೀಡಿದೆ. ಸಾಮಾಜಿಕ ಕಳಕಳಿ, ರೈತಪರ ಧೋರಣೆಯನ್ನು ಒಳಗೊಂಡು, ಗುಡಿಗೋಪುರ, ಕೆರೆಕಟ್ಟೆ ಸೇರಿದಂತೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮಾದರಿ ರಾಜ ಮನೆತನವಾಗಿ ಹೊರಹೊಮ್ಮಿದೆ. ಅಂತಹ ಸಾಮ್ರಾಜ್ಯವನ್ನು ಆಳಿದ ಕೆಂಪೇಗೌಡರು ಕೇವಲ ಬೆಂಗಳೂರಿಗಲ್ಲದೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇಂದು ಬೆಂಗಳೂರು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕೆಂಪೇಗೌಡರ ಅಹರ್ನಿಸಿ ಪರಿಶ್ರಮವೇ ಕಾರಣ. ಹಾಗಾಗಿ ಕೆಂಪೇಗೌಡರ ಜೀವನ ಚರಿತ್ರೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥಾನಂದ ಸ್ವಾಮೀಜಿ, ಚುಂಚನಗಿರಿ ಮಠದ ಶಿವಾನಂದ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಮಠದ ಶಿವಾನಂದ ಪುರಿ ಸ್ವಾಮೀಜಿ, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಎಂ.ಕೆ.ಸೋಮಶೇಖರ್, ಮೇಯರ್ ಎಂ.ಜೆ.ರವಿಕುಮಾರ್, ಉಪಮೇಯರ್ ರತ್ನ ಲಕ್ಷ್ಮಣ್, ಮೈಲ್ಯಾಕ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.(ವರದಿ ಬಿ.ಎಂ)

Leave a Reply

comments

Related Articles

error: