ಕರ್ನಾಟಕ

ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಗಿಡ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ : ರಘುನಂದನ್

ರಾಜ್ಯ(ತುಮಕೂರು)ಜೂ.27:-  ಶಾಲೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸುವ ಅತಿಥಿಗಳಿಗೆ ಹಾರ ತುರಾಯಿ ಕೊಡುವ ಬದಲು ಸಸಿಗಳನ್ನು ಕೊಡುವ ಅಭ್ಯಾಸ ರೂಢಿಸಿಕೊಳ್ಳುವಂತೆ ದಸೂಡಿ ಕ್ಲಸ್ಟರ್‍ನ ಸಿಆರ್‍ಪಿ ರಘುನಂದನ್ ಅವರು ಸಲಹೆ ನೀಡಿದರು.

ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆ, ಪೋಷಕರ ಸಭೆ ಮತ್ತು ಜಲವೇ ಜೀವನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ವಿದ್ಯಾಭ್ಯಾಸ, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೋಷಕರು,  ಕಡ್ಡಾಯವಾಗಿ ಮಕ್ಕಳು ಶಾಲೆಗೆ ಬರುವಂತೆ ಗಮನ ಹರಿಸಬೇಕು. ಕೃಷಿ ಚಟುವಟಿಕೆಗಳ ಜತೆ ಜತೆಗೆ ಮರಗಿಡಗಳ ಮಹತ್ವದ ಬಗ್ಗೆ ತಿಳಿಸಿ, ಜಮೀನು, ತೋಟದ ಬದುವಿನಲ್ಲಿ ಅರಣ್ಯ ಗಿಡಗಳನ್ನು ಬೆಳೆಸುವಂತೆ ಆಸಕ್ತಿ ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮನೆಗೊಂದು ಮರ, ಊರಿಗೊಂದು ವನ ಶೀರ್ಷಿಕೆಯಲ್ಲಿ ಪೋಷಕರಿಗೆ ಬೇವು, ಹಲಸು, ನೇರಳೆ, ಬೆಟ್ಟದ ನೆಲ್ಲಿ ಮತ್ತಿತರ ಗಿಡಗಳನ್ನು ವಿತರಿಸಲಾಯಿತು. ಸುವರ್ಣ ವಿದ್ಯಾ ಚೇತನದ ರಾಮಕೃಷ್ಣಪ್ಪ ಅವರು ಮಕ್ಕಳಿಗೆ ನೀರಿನ ಹಾಡು ಹೇಳಿಕೊಡುವ ಮೂಲಕ ನೀರಿನ ಮಹತ್ವ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಿದರು. ಗ್ರಾ.ಪಂ. ಅಧ್ಯಕ್ಷೆ ಶೋಭಾ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದಸೂಡಿ ಕ್ಲಸ್ಟರ್‍ನ ಸಿಆರ್‍ಪಿ ರಘುನಂದನ್, ಶಾಲೆಯ ಮುಖ್ಯ ಶಿಕ್ಷಕ ರಾಜಣ್ಣ, ಹೊಯ್ಸಳಕಟ್ಟೆ ಸಿಆರ್‍ಪಿ ಲೋಕೇಶ್, ಚಾಲುಕ್ಯ ಯುವ ಶಕ್ತಿ ಟ್ರಸ್ಟ್, ಗ್ರಾ.ಪಂ. ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರುಗಳು, ಪೋಷಕರುಗಳು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: