ಮೈಸೂರು

ಪಂಜಿನ ಕವಾಯತು ಮೂಲಕ ನಾಡಹಬ್ಬಕ್ಕೆ ವೈಭವೋಪೇತ ತೆರೆ

kavaytu-webಸುತ್ತಲೂ ಕಾರ್ಗತ್ತಲು ಅಲ್ಲಲ್ಲಿ ಒಮ್ಮೊಮ್ಮೆ ಬೆಳಕಿನ ಚಿತ್ತಾರ. ಅವುಗಳ ನಡುವೆಯೇ ಸಾಹಸಮಯ ದೃಶ್ಯಗಳು. ಇವೆಲ್ಲ ಕಂಡು ಬಂದಿದ್ದು ಬನ್ನಿಮಂಟಪದಲ್ಲಿ.  ಅಕ್ಟೋಬರ್ ಒಂದರಿಂದ ಆರಂಭಗೊಂಡ ನಾಡಹಬ್ಬ ದಸರಾ ಹನ್ನೊಂದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು,  ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ಮೂಲಕ ವೈಭವೋಪೇತವಾಗಿ ತೆರೆ ಕಂಡಿತು.

ಮಳೆಯ ಕಾರಣ ತಡವಾಗಿ ಆರಂಭಗೊಂಡ ಜಂಬೂಸವಾರಿ ಬನ್ನಿಮಂಟಪವನ್ನು ತಲುಪುವ ವೇಳೆ ರಾತ್ರಿಯಾಗಿತ್ತು.  ಬಳಿಕ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯಪಾಲರು ತೆರೆದ ಜೀಪ್ ನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. 21 ಕುಶಾಲ ತೋಪುಗಳನ್ನು ಸಿಡಿಸಲಾಯಿತು. ಮಹಿಳಾಪೊಲೀಸರು, ಎನ್ ಸಿಸಿ ವಿದ್ಯಾರ್ಥಿಗಳು, ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಎಚ್.ಡಿ. ಕೋಟೆ ತಾಲೂಕಿನ ದೇವಲಾಪುರ ಗ್ರಾಮದ ಅಮ್ಮ ರಾಮಚಂದ್ರ, ಅಮ್ಮ ವಸುಂಧರಾ ಕಲಾ ತಂಡದವರು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಮಧ್ಯಪ್ರದೇಶದ ಡೇರ್ ಡೆವಿಲ್ ಮಿಲಿಟರಿ ಪೊಲೀಸರಿಂದ ನಡೆದ ಮೋಟರ್ ಸೈಕಲ್ ಸ್ಟಂಟ್ಸ್ ನೆರೆದವರ ಎದೆ ಝಲ್ಲೆನಿಸುವಂತಿತ್ತು. ಹ್ಯಾಂಡಲ್ ಹಿಡಿಯದೇ, ಬೈಕ್ ನಲ್ಲಿ ಏಣಿಯ ಮೇಲೇರಿ ನಿಂತು ಚಾಲನೆ, ಹಿಮ್ಮುಖವಾಗಿ ಚಾಲನೆ ಇವೆಲ್ಲವೂ ಒಮ್ಮೆಲೆ ಉಸಿರನ್ನು ನಿಲ್ಲಿಸಿದ ಅನುಭವ ನೀಡಿತು.  ನಾಗೇಶ್ ಕಂದಗಾಲ ಇಂಗ್ಲಿಷ್ ಕ್ರಿಯೇಷನ್ ತಂಡದವರು ನಡೆಸಿಕೊಟ್ಟ ಜಾನಪದ ನೃತ್ಯ ಮನಸೂರೆಗೊಂಡರೆ ಮೌಂಟೆಡ್ ಪೊಲೀಸರು ನಡೆಸಿದ ಟೆಂಟ್ ಪೆಗ್ಗಿಂಗ್,  ಬಾಗಲಕೋಟೆಯ ತುಳಸಿಗೆರೆಯ ಮಲ್ಲಕಂಬ ಸಂಸ್ಥೆಯವರು ಪ್ರಸ್ತುತಪಡಿಸಿದ ಮಲ್ಲಕಂಬ ಕಸರತ್ತು ಪ್ರದರ್ಶನ ಹಾಗೂ ರಾಜ್ಯ ಪೊಲೀಸ್ ಪಡೆಯಿಂದ ನಡೆದ ಪಂಜಿನ ಕವಾಯತು ಪ್ರೇಕ್ಷಕರ ಮೈನವಿರೇಳಿಸಿತು. ಪಂಜನ್ನು ಕೈಯ್ಯಲ್ಲಿ ಹಿಡಿದ ತಂಡ ಅವುಗಳಿಗೆ ಬರಹ ರೂಪ ಕೊಟ್ಟಿತು. ಸುಸ್ವಾಗತ, ಜೈ ಹಿಂದ್, ಜೈ ಚಾಮುಂಡೇಶ್ವರಿ ಮುಂತಾದ ಬರಹಗಳು ಮೂಡಿ ಬಂದು ಪ್ರೇಕ್ಷಕರಿಂದ ವ್ಹಾವ್ ಎನ್ನುವ ಉದ್ಘಾರ ಹೊರಡಿಸಿತು. ಹನ್ನೊಂದು ದಿನಗಳ ಕಾಲ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಮಂಗಳವಾರ ರಾತ್ರಿ ವೈಭವೋಪೇತ ತೆರೆ ಕಂಡಿತು.

ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಬಿ.ಎಲ್.ಭೈರಪ್ಪ, ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: