ಕರ್ನಾಟಕ

ತಿಂಗಳಿಗೊಂದು ಗ್ರಾಮ ಸ್ವಚ್ಛತಾ ಕಾರ್ಯಕ್ರಮ

ರಾಜ್ಯ(ತುಮಕೂರು)ಜೂ. 27:- ಹುಳಿಯಾರು ಹಂದನಕೆರೆ ಹೋಬಳಿಯ ದೊಡ್ಡ ಎಣ್ಣೇಗೆರೆ ಗ್ರಾಮ ಪಂಚಾಯತ್ ವತಿಯಿಂದ ವಿಭಿನ್ನ ಹಾಗೂ ವಿಶಿಷ್ಠ ಕಾರ್ಯಕ್ರಮ ಎನ್ನುವಂತೆ ತಿಂಗಳಿಗೊಂದು ಗ್ರಾಮ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ತಿಂಗಳ 4ನೇ ಶನಿವಾರ ಗ್ರಾ.ಪಂ. ವ್ಯಾಪ್ತಿಯ 12 ಗ್ರಾಮಗಳ ಹೆಸರಲ್ಲಿ ಒಂದನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಆ ದಿನ ಆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು. ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರಾದಿಯಾಗಿ ಆ ದಿನ ಎಲ್ಲಾ ಜನಪ್ರತಿನಿಧಿಗಳು ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಭಾಗಿಯಾಗಲಿದ್ದಾರೆ. ಜತೆಗೆ ಊರಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯತ್ ಪೌರಕಾರ್ಮಿಕರು, ಪಂಚಾಯತ್ ಸಿಬ್ಬಂದಿ, ಯುವ ಸಮೂಹವನ್ನೂ ಬಳಕೆ ಮಾಡಿಕೊಂಡು ಇಡೀ ಊರಿಗೆ ಊರನ್ನೇ ಸ್ವಚ್ಛ ಮಾಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ಈ ಅಪರೂಪದ, ಮಾದರಿಯ ಹಾಗೂ ಅನುಕರಣೀಯ ಅಭಿಯಾನದ ಮೊದಲ ಗ್ರಾಮವಾಗಿ ಚೋರಗೊಂಡನಹಳ್ಳಿ ಗ್ರಾಮವು ಲಾಟರಿ ಮೂಲಕ ಆಯ್ಕೆಯಾಯಿತು. ಆ ಗ್ರಾಮಕ್ಕೆ 21 ಮಂದಿ ಗ್ರಾ.ಪಂ. ಸದಸ್ಯರು, 15 ಮಂದಿ ನೀರುಘಂಟಿಗಳು ಸೇರಿದಂತೆ ಅನೇಕ ಮಂದಿ ತೆರಳಿ ಚರಂಡಿ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಊರಿನ ಹೃದಯ ಭಾಗದಲ್ಲಿದ್ದ ತಿಪ್ಪೆಗಳನ್ನು ಸ್ಥಳಾಂತರಿಸಲಾಯಿತು. ನಂತರ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಶೌಚಾಲಯದ ಮಹತ್ವ ಹಾಗೂ ಗ್ರಾ.ಪಂ.ನಿಂದ ದೊರೆಯುವ ಅನುದಾನದ ಬಗ್ಗೆ ಮಾಹಿತಿ ನೀಡಿ ಕರಪತ್ರಗಳನ್ನು ಹಂಚಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಎಸ್.ಗೀತಾ, ಉಪಾಧ್ಯಕ್ಷ ಲಲಿತಮ್ಮ, ಪಿಡಿಓ ನಾಗರಾಜು, ಎಂಜಿನಿಯರ್ ಮಲ್ಲಿಕಾರ್ಜುನ್, ತಾ.ಪಂ. ಸದಸ್ಯ ಶ್ರೀಹರ್ಷ, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿ.ಎಂ. ಶಿವಕುಮಾರ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಧನಂಜಯ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: