ಕರ್ನಾಟಕ

ನಾಡಪ್ರಭುವಿನ ಜಯಂತಿ : ಕೆಂಪೇಗೌಡರ ಆದರ್ಶ ಪಾಲಿಸಲು ಪ್ರತಾಪ್ ಸಿಂಹ ಕರೆ

ಮಡಿಕೇರಿ ಜೂ.28 : ಬೆಂಗಳೂರು ನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವುದರ ಜೊತೆಯಲ್ಲೇ ಅವರು ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ ಸಾಗಿದರೆ ಸಮಾಜಕ್ಕೆ ಹಾಗೂ ದೇಶಕ್ಕೆ ಲಾಭವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಮಂಗಳವಾರ ನಗರದ ಹೊಟೇಲ್ ರಾಜ್ ಸಭಾಂಗಣದಲ್ಲಿ  ನಡೆಯಿತು. ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದರು, ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದ ಕೆಂಪೇಗೌಡರು ಎಲ್ಲಾ ಜಾತಿ, ಧರ್ಮದವರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು. ಬೆಂಗಳೂರು ನಗರ ಯಾವುದೇ ಪ್ರದೇಶಗಳಿಗೆ ಸರಿ ಸಾಟಿ ಇಲ್ಲ ಎನ್ನುವ ರೀತಿಯಲ್ಲಿ ನಿರ್ಮಾಣಗೊಳ್ಳಲು ಕೆಂಪೇಗೌಡರು ಕಾರಣಕರ್ತರಾಗಿದ್ದು, ಪ್ರತಿಯೊಬ್ಬರು ಅಭಿವೃದ್ಧಿಯ ಚಿಂತನೆಯನ್ನು ಹೊಂದಬೇಕು ಎಂದು ಕರೆ ನೀಡಿದರು. ಬಹಳಷ್ಟು ಮಹಾತ್ಮರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದು ಅರ್ಥಪೂರ್ಣಗೊಳ್ಳಬೇಕಾದರೆ ಹಿರಿಯರ ಅದರ್ಶಗಳನ್ನು ಪಾಲಿಸುವುದು ಮುಖ್ಯವೆಂದರು.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಂಪೇಗೌಡರು ಕಟ್ಟಿ ಬೆಳೆಸಿದಂತಹ ಬೆಂಗಳೂರನ್ನು ರಕ್ಷಿಸುವ ಮತ್ತು ಮತ್ತಷ್ಟು ಅಭಿವೃದ್ಧಿ ಪಡಿಸುವ ಕಾರ್ಯವಾಗಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ,  ನಾಡಪ್ರಭು ಕೆಂಪೇಗೌಡರು ಮಾಡಿರುವ ಮಹತ್ಕಾರ್ಯಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿ ಹೇಳುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಬೆಂಗಳೂರು ನಗರ ದೇಶದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಹೆಸರು ಪಡೆಯಲು ಕೆಂಪೆಗೌಡರು ಕಾರಣಕರ್ತರಾಗಿದ್ದಾರೆ. ನಾಡನ್ನು ಕಟ್ಟಿ ಬೆಳೆಸಲು ಎಲ್ಲರನ್ನು ಒಗ್ಗೂಡಿಸುವುದರೊಂದಿಗೆ ಕನ್ನಡ ನಾಡುನಡಿಯನ್ನು ಬೆಳೆಸುವಲ್ಲಿಯೂ ಕಾಳಜಿ ತೋರಬೇಕಾಗಿದೆ ಎಂದರು. ಒಕ್ಕಲಿಗರ ಸಂಘದ ಪ್ರಮುಖರಾದ ವಿ.ಪಿ.ಶಶಿಧರ್, ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಂ.ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮುತ್ತಣ್ಣ, ಕೃಷ್ಣರಾಜ್, ಬಿ.ಬಿ.ಭಾರತೀಶ್, ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ ಹಾಗೂ ಒಕ್ಕಲಿಗರ ಸಂಘದ ಪ್ರಮುಖರು ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: