ಮೈಸೂರು

ಅಶ್ಲೀಲ ಜಾಹಿರಾತು ಫಲಕ ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜೂ.28:- ನಗರದ ವಿನೋಬಾ ರಸ್ತೆಯಲ್ಲಿರುವ ರಿಗಾಲೀಸ್ ಹೋಟೆಲ್ ಪಕ್ಕದಲ್ಲಿರುವ ಬಸ್ ತಂಗುದಾಣದಲ್ಲಿ ಮೈಸೂರು ನಗರಪಾಲಿಕೆ ವತಿಯಿಂದ ಪರವಾನಿಗೆ ಪಡೆದು ಅಶ್ಲೀಲ ರೀತಿಯಲ್ಲಿ ಅಳವಡಿಸಲಾಗಿರುವ ಪುರುಷರ ಒಳ ಉಡುಪಿನ ಜಾಹಿರಾತು ಫಲಕವನ್ನು ಮರೆಮಾಚಿಸಲು ಬಟ್ಟೆಯಿಂದ ಮುಚ್ಚುವುದರ ಮೂಲಕ ಬೆಳಕು ಸಂಸ್ಥೆಯ ಸದಸ್ಯರು ಪಾಲಿಕೆಯ ಗಮನ ಸೆಳೆದರಲ್ಲದೇ ಪ್ರತಿಭಟನೆ ನಡೆಸಿದರು.

ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ.ನಿಶಾಂತ್ ಮಾತನಾಡಿ ಮೈಸೂರು ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದಿರುವ ನಗರವಾಗಿದ್ದು, ಇಲ್ಲಿನ ನಾಗರಿಕರು ಪ್ರಜ್ಞಾವಂತರಾಗಿದ್ದಾರೆ. ವಿನೋಬಾ ರಸ್ತೆಯಲ್ಲಿ ದೇಶ ವಿದೇಶದ ಅನೇಕ ಪ್ರತಿನಿಧಿಗಳು ಪ್ರವಾಸಿಗರು ತಂಗುವ ಹೆಸರಾಂತ ಹೋಟೆಲ್ ಪಕ್ಕದಲ್ಲಿನ  ಬಸ್ ತಂಗುದಾಣದಲ್ಲಿ  ಪಾಲಿಕೆಯ ಪರವಾನಿಗೆ ಪಡೆದು ಪುರುಷರ ಒಳ ಉಡುಪು ಜಾಹಿರಾತು ಫಲಕವನ್ನು ಹಾಕಲಾಗಿದ್ದು ಪುರುಷ ಕೇವಲ ಒಳ ಉಡುಪನ್ನು ಮಾತ್ರ ಧರಿಸಿ ನಿಂತಿರುವ ಚಿತ್ರವನ್ನು ಪ್ರಕಟಿಸಲಾಗಿದೆ. ಮೈಸೂರು ಪಾಲಿಕೆಯಿಂದಲೇ ಮೈಸೂರಿನ ಮಾನಹಾನಿಯಾಗುತ್ತಿದೆ ಎಂದು ಆರೋಪಿಸಿದರು. ಕೂಡಲೇ ಜಾಹಿರಾತು ಫಲಕ ತೆರವುಗೊಳಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಜಾಹಿರಾತು ಫಲಕಗಳಿಗೆ ಪರವಾನಿಗೆಯನ್ನು ನೀಡಬೇಡಿ ಎಂದು ಒತ್ತಾಯಿಸಿದರಲ್ಲದೇ ಪಾಲಿಕೆಗೆ ತೆರಳಿ  ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಕೆ.ದೇವರಾಜ್, ಬೆಳಕು ಸಂಸ್ಥೆಯ ಸಹ ಸಂಚಾಲಕ ಧನುಷ್, ವಿನಯ್,ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: