ಮೈಸೂರು

ಮುಗಿದ ದಸರಾ; ಅರಮನೆಯ ಸುತ್ತ ಕಸದ ರಾಶಿ: ಸ್ವಚ್ಛತೆ ಕೈಗೊಂಡ ನರೇನ್ ಫೌಂಡೇಶನ್

cleaningವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಹನ್ನೊಂದು ದಿನಗಳ ಕಾಲ ವಿಜೃಂಭಣೆಯಿಂದ ನಡೆದು, ಜನತೆ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯೊಳಗೆ ಮಿಂದೆದ್ದರು. ಮೈಸೂರು ದಸರಾ ಉತ್ಸವದ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂ ಸವಾರಿ ಮೆರವಣಿಗೆ ನೋಡಲು ಸ್ಥಳೀಯರೂ ಸೇರಿದಂತೆ  ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸಿದ್ದರು.  ಬೆಳಿಗ್ಗೆಯಿಂದ ರಾತ್ರಿಯ ತನಕ ವೀಕ್ಷಣೆಗಾಗಿ ಕಾಯುತ್ತ ಕುಳಿತ ಪ್ರವಾಸಿಗರು ಬಾಯಾರಿಕೆಯನ್ನು ತಣಿಸಿಕೊಳ್ಳಲು ತಂದ ಪ್ಲಾಸ್ಟಿಕ್ ಬಾಟಲಿಗಳ ರಾಶಿ  ಹಾಗೂ ತಿಂಡಿ ತಿನಿಸುಗಳ ಪೊಟ್ಟಣಗಳ ರಾಶಿ ಅರಮನೆಯ ಅಕ್ಕಪಕ್ಕ ಅಲ್ಲಲ್ಲಿ ಕಾಲಿಗೆ ತೊಡರುತ್ತಿದ್ದವು.

ಮೈಸೂರು ನಗರ ಸಾಂಸ್ಕೃತಿಕ ನಗರಿಯಷ್ಟೇ ಅಲ್ಲ. ಸ್ವಚ್ಛತೆಯ ನಗರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಎರಡು ಬಾರಿ ಗೌರವವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಅದರಲ್ಲೂ ಪ್ರವಾಸಿ ತಾಣ ಅರಮನೆಯ ಸುತ್ತಮುತ್ತ  ಕಸಗಳು ಕಾಣಿಸಿಕೊಂಡರೆ ಹೇಗೆ? ಅದರಿಂದ ಬುಧವಾರ ಮುಂಜಾನೆಯಿಂದಲೇ ಅರಮನೆಯ ಸುತ್ತಮುತ್ತ ಬಿದ್ದಿರುವ ಕಸದ ರಾಶಿಗಳನ್ನು ಸ್ವಚ್ಛಗೊಳಿಸುವತ್ತ ನರೇನ್ ಫೌಂಡೇಶನ್ ಮುಂದಾಗಿದೆ. ಇವರಿಗೆ ಮಹಾಜನ ಸಂಸ್ಥೆ ವರಕೋಡು ಗ್ರಾಮದ ಸರ್ಕಾರಿ ಶಾಲೆಯ ಸುಮಾರು 300 ಮಕ್ಕಳು ಸಾಥ್ ನೀಡಿದ್ದಾರೆ. ಇನ್ನೂ ಶಾಲಾ-ಕಾಲೇಜುಗಳಿಗೆ ದಸರಾ ರಜಾ ಮುಗಿಯದ ಕಾರಣ ಅರಮನೆಗೆ ಭೇಟಿ ಕೊಡುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಅದಕ್ಕಾಗಿ ದಸರಾ ಮುಗಿದ ಮರುದಿನವೇ ಸ್ವಚ್ಛತಾಕಾರ್ಯ ಆರಂಭವಾಗಿದೆ.

ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿದ್ದ ತಂಡವನ್ನು ಭೇಟಿ ಮಾಡಿದರು. ಈ ಸಂದರ್ಭ ನರೇನ್ ಫೌಂಡೇಶನ್ ಮುಖ್ಯಸ್ಥರು ಹಾಗೂ ಮಹಾಜನ ಕಾಲೇಜಿನ ಪ್ರಾಂಶುಪಾಲ ಕೆ.ವಿ. ಪ್ರಭಾಕರ, ಕರ್ವ ಚಿತ್ರದ ನಾಯಕಿ ಅನು, ವರಕೂಡು ಗ್ರಾಮದ ವಿ.ಎಂ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: