ಕರ್ನಾಟಕ

ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯ

ರಾಜ್ಯ(ತುಮಕೂರು)ಜೂ.28:-ಹುಳಿಯಾರು  ಹೋಬಳಿಯ ನುಲೇನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ನೀರಿನ ಸಮಸ್ಯೆ ನಿವಾರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿ ಐದಾರು ಬೀದಿಗಳಿದ್ದು, ನೀರು ಪೂರೈಸಲು 1 ಕೊಳವೆ ಬಾವಿ ಕೊರೆಸಿದ್ದು, ಕಿರುನೀರು ಸರಬರಾಜು ಯೋಜನೆಯ ಮೂಲಕ ಎಲ್ಲ ಬೀದಿಗಳಿಗೂ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ, ಪೈಪ್‍ಲೈನ್ ಹಾಕಿ ನಲ್ಲಿಗಳ ಮೂಲಕ ಬೀದಿಗಳಲ್ಲಿ ನೀರನ್ನು ಪೂರೈಕೆ ಮಾಡುತ್ತಿತ್ತು.
ಆದರೆ, 2-3 ತಿಂಗಳಿಂದ ಕೊಳವೆ ಬಾವಿಯಲ್ಲಿ ನೀರಿನಮಟ್ಟ ಕಡಿಮೆಯಾಗಿರುವ ಪರಿಣಾಮ ನಲ್ಲಿಗಳಲ್ಲಿ ನೀರು ಸರಬರಾಜಾಗದೇ ತೊಂದರೆಯಾಗಿದೆ. ಬೆಳಿಗ್ಗೆ 2-3 ಗಂಟೆ ಮಾತ್ರ ಬಿಡುತ್ತಾರೆ. ಹಾಗಾಗಿ ಗ್ರಾಮದ 200 ಮನೆಯವರು 3 ಗಂಟೆಯೊಳಗೆ ಸರತಿ ಸಾಲಿನಲ್ಲಿ ನಿಂತು ನೀರು ಹಿಡಿಯಬೇಕು. ಒಂದೊಂದು ಮನೆಗೆ ಎರಡೆರಡು ಬಿಂದಿಗೆ ನೀರು ಸಿಕ್ಕಿದರೆ ಹೆಚ್ಚು ಎನ್ನುವಂತಾಗಿದೆ.
ನಿವಾಸಿಗಳು ರೈತರ ಜಮೀನಿಗೆ ತೆರಳಿ ನೀರು ತರುವ ಸ್ಥಿತಿಯಿದೆ. ಸಮಸ್ಯೆ ಬಗ್ಗೆ ಈಗಾಗಲೇ ಗ್ರಾ.ಪಂ. ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಮನವಿ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: