ಕರ್ನಾಟಕ

ಚಿತ್ರಕಲಾ ರಂಗದಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಖ್ಯಾತರಿಗೆ ಸನ್ಮಾನ

ರಾಜ್ಯ(ಬೆಂಗಳೂರು) ಜೂ. 28:- ಚಿತ್ರಕಲಾ ರಂಗದಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಖ್ಯಾತ ವ್ಯಂಗ್ಯ ಚಿತ್ರಕಾರ ಬೆಂಗಳೂರಿನ ಬಿ.ಜಿ. ಗುಜ್ಜಾರಪ್ಪ, ಹುಬ್ಬಳ್ಳಿಯ ಎಂ.ಸಿ. ಚೆಟ್ಟಿ ಹಾಗೂ ಕಲಬುರಗಿಯ ವಿಜಯ ಬಾಗೋಡಿಯವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಕೊಡ ಮಾಡುವ 2017ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಾ. ಎಂ. ಎಸ್. ಮೂರ್ತಿ ಮಾತನಾಡಿ ಈ ಮೂವರು ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕಗಳನ್ನು ನೀಡಿ ಗೌರವಿಸಲಾಗುವುದು. ಮೂವರು ಗೌರವ ಪ್ರಶಸ್ತಿ ಪುರಸ್ಕೃತರಿಗೆ ಜುಲೈ 5 ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
2008 ರಿಂದ ಪುಸ್ತಕ ಬಹುಮಾನ ಪ್ರಶಸ್ತಿ ಸ್ಥಗಿತಗೊಂಡಿತ್ತು. ಇದನ್ನು ಪುನರಾರಂಭಿಸಲಾಗಿದ್ದು, 2016 ಮತ್ತು 17ನೇ ಸಾಲಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊ. ಎಸ್.ಸಿ. ಪಾಟೀಲ, ಕಲಬುರುಗಿಯ ಡಾ. ಮಲ್ಲಿಕಾರ್ಜುನ. ಸಿ. ಬಾಗೋಡಿ ಅವರು ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು. 46ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ 2017-18ನೇ ಸಾಲಿನಲ್ಲಿ ತೈಲ ವರ್ಣ, ಅಕ್ರೇಲಿಕ್, ಮಿಶ್ರ ಮಾಧ್ಯಮ, ಲಿಥೋಗ್ರಫಿ, ಟನ್ ಇಂಕ್ ವಿಭಾಗದಲ್ಲಿ 10 ಮಂದಿ ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಇನ್ನೂ 10 ಮಂದಿ ಕಲಾವಿದರಿಗೆ ಸುವರ್ಣ ಸಂಭ್ರಮ ಕಲಾ ಪುರಸ್ಕಾರ ವಿಶೇಷ ಬಹುಮಾನವನ್ನು ಪ್ರಕಟಿಸಲಾಗಿದೆ ಎಂದು ಡಾ. ಎಂ.ಎಸ್. ಮೂರ್ತಿ ತಿಳಿಸಿದರು. ಕಲಾಗ್ರಾಮದಲ್ಲಿ ಗ್ರಾಫಿಕ್ ಸೆಂಟರ್ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಫಿಕ್ ಸೆಂಟರ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು. 3.5 ಕೋಟಿ ರೂ. ವೆಚ್ಚದ ಈ ಕಟ್ಟಡಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.   ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಮುಂಬರುವ ಅಧ್ಯಕ್ಷರು ಗ್ರಾಫಿಕ್ ಸೆಂಟರ್ ಕಟ್ಟಡ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: