ಕರ್ನಾಟಕಪ್ರಮುಖ ಸುದ್ದಿಮೈಸೂರು

ಅ. 14 ರಿಂದ 16 ರವರೆಗೆ ಕಲಾಭಿವರ್ಧನ 2016: ಸಂಗೀತ, ನೃತ್ಯ ಸಾಧಕರಿಗೆ ಕಲೋತ್ತುಂಗ ಪ್ರಶಸ್ತಿ ಪ್ರದಾನ

ಮೈಸೂರಿನ ಕಲಾ ಸಂದೇಶ ಪ್ರತಿಷ್ಠಾನವೂ ಕಲಾಭಿವರ್ಧನ 2016ರ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಸಂದರ್ಭದಲ್ಲಿ ಶಾಸ್ತ್ರಿಯ ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸಂಗೀತ ಕಲೋತ್ತುಂಗ ಹಾಗೂ ನಾಟ್ಯ ಕಲೋತ್ತುಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿ ರಾಧಿಕಾ ಎಸ್. ಭಾರ್ಗವಿ ತಿಳಿಸಿದರು.

ಅ. 14 ರಿಂದ ಅ.16 ರ ವರೆಗೆ ಸಂಜೆ 5.45ಕ್ಕೆ ನಗರದ ಜಗನ್ಮೋಹನ ಅರಮನೆ ಆವರಣದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಅ.14 ರ ಶುಕ್ರವಾರದ ಕಾರ್ಯಕ್ರಮವನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ವಿದುಷಿ ಡಾ. ಸರ್ವಮಂಗಳ ಉದ್ಘಾಟಿಸುವರು. ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಹಾಗೂ ಸಂಗೀತ ಕಲೋತ್ತುಂಗ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಡಾ. ರಾ.ಸ. ನಂದಕುಮಾರ್ ಮುಖ್ಯ ಅತಿಥಿಗಳಾಗಿ ಹಾಗೂ ಅತಿಥಿಗಳಾಗಿ ಸಮಿತಿಯ ಸದಸ್ಯರು ಉಪಸ್ಥಿತರಿರುವರು. ವಿದುಷಿ ಡಾ. ಗೌರಿ ಕುಪ್ಪಸ್ವಾಮಿಯವರಿಗೆ ಸಂಗೀತ ಕಲೋತ್ತುಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಅ.15ರಂದು ವಿದುಷಿ ಡಾ. ಲಲಿತಾ ಶ್ರೀನಿವಾಸ್ ಅವರಿಗೆ ನಾಟ್ಯ ಕಲೋತ್ತುಂಗ ಪ್ರಶಸ್ತಿ ಪ್ರದಾನ ಮಾಡಲಿದ್ದು ಕರ್ನಾಟಕ ನೃತ್ಯ ಕಲಾ ಪರಿಷತ್ ಹಾಗೂ ನಾಟ್ಯ ಕಲೋತ್ತುಂಗ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಸಾಯಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅತಿಥಿಗಳಾಗಿ ಸಮಿತಿ ಸದಸ್ಯರು ಉಪಸ್ಥಿತರಿರುವರು. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಇಪ್ಪತ್ತೈದು ಸಾವಿರ ನಗದು ಗೌರವ ಧನ ನೀಡಿ ಪುರಸ್ಕರಿಸಲಾಗುವುದು. ನೂಪುರ ಕಲಾವಿದರು ‘ನೃತ್ಯ ಕರ್ನಾಟಕ’ ನೃತ್ಯ ರೂಪಕ ಪ್ರಸ್ತುತ ಪಡಿಸುವರು.

ಅ. 16 ರ ಭಾನುವಾರದಂದು ‘ನಮಾಮಿ ಭಗವತ್ಪಾದಂ’ ಏಕವ್ಯಕ್ತಿ ನೃತ್ಯರೂಪಕವನ್ನು ಕೆ. ಸಂದೇಶ್ ಭಾರ್ಗವ್ ನಡೆಸಿಕೊಡುವರು. ಶಂಕರ ಸಿದ್ದಾಂತ ತತ್ವ ಚಿಂತಕ ಡಾ. ಬಿ.ಜೆ. ರಂಗನಾಥ್, ಭರತನಾಟ್ಯ ಕಲಾವಿದೆ ವಿದುಷಿ ಡಾ. ರಾಧಿಕಾ ನಂದಕುಮಾರ್ ಅತಿಥಿಗಳಾಗಿ ಭಾಗವಹಿಸುವರು. ಕಲಾ ಸಂದೇಶದ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಡಿ. ಉಮಾಪತಿ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸುವರು “ನಮಾಮಿ ಭಗವತ್ಪಾದಂ’ ಏಕವ್ಯಕ್ತಿ ನೃತ್ಯರೂಪಕವನ್ನು ಕೆ. ಸಂದೇಶ್ ಭಾರ್ಗವ್ ನಡೆಸಿಕೊಡುವರು. ನೃತ್ಯ ರೂಪಕದ ಸಾಹಿತ್ಯ ಪರಿಕಲ್ಪನೆ ಡಾ. ಜ್ಯೋತಿ ಶಂಕರ್ ಹಾಗೂ ನೃತ್ಯ ಸಂಯೋಜನೆ ಡಾ. ವಸುಂಧರಾ ದೊರೆಸ್ವಾಮಿಯವರದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಹರಿಕೃಷ್ಣನ್, ಗುಣಶೀಲಾ ಹಾಗೂ ಶೃತಿ ಉಪಸ್ಥಿತರಿದ್ದರು.

Leave a Reply

comments

Related Articles

error: