ಪ್ರಮುಖ ಸುದ್ದಿಮೈಸೂರು

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ : ಬಿ.ರಮಾನಾಥ ರೈ

ಮೈಸೂರು,ಜೂ.28:- ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೊಂಡ ನಂತರ ದೇಶದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ  ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ಹೇಳಿದರು.
ಹುಣಸೂರು ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬರೆದಿರುವ ಕಾಡು ಜೀವನ, ಕಾಡಿನ ಜಾತ್ರೆ ಮತ್ತು ಅನುಭವ ಮಂಟಪ ಕೃತಿ ಲೋಕಾರ್ಪಣೆ  ಸಮಾರಂಭದಲ್ಲಿ  ಪಾಲ್ಗೊಂಡು, ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.  ವನ್ಯಜೀವಿಗಳ ಸಂರಕ್ಷಣೆಯಲ್ಲಿ ರಾಜ್ಯವೇ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅರಣ್ಯ ಸಂರಕ್ಷಣೆ ಕಾಯ್ದೆ
ಜಾರಿಗೆ ತಂದ ನಂತರ ಸರ್ಕಾರಗಳು ಅರಣ್ಯ ಒತ್ತುವರಿ ಪ್ರಕರಣಗಳ ಕುರಿತು ಅತ್ಯಂತ ಸೂಕ್ಷ್ಮವಾಗಿ ವ್ಯವಹರಿಸಬೇಕಿದೆ. ಕಾಯ್ದೆಯ ಜಾರಿಯ ನಂತರ ಇಲ್ಲಿಯವರೆಗೆ 35 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಕಾಡನ್ನು ಉಳಿಸಿ ಬೆಳೆಸಿದ ಗಿರಿಜನರ ಸ್ಥಿತಿ ಬದಲಾಗದೇ ಕಾಡಿನ ಸ್ಥಿತಿ ಬದಲಾಗುವುದಾದರೂ ಹೇಗೆ? ಪತ್ರಕರ್ತ ಅಂಶಿ ಈ ನಿಟ್ಟಿನಲ್ಲಿ ಗಿರಿಜನರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತಾದ ಸಮಗ್ರ ಅಭಿವೃದ್ಧಿ ಹಿನ್ನೆಲೆ ಬರೆದಿರುವ ಕೃತಿಗಳು ಪತ್ರಕರ್ತನೊಬ್ಬನ ಸಾಮಾಜಿಕ ಕಳಕಳಿಯ ಪ್ರತೀಕವಾಗಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಾಮಾನ್ಯ ಜನರ ಸಮಸ್ಯೆಗಳನ್ನು ಅನುಭವ ಮಂಟಪದಲ್ಲಿ ಎಳೆಎಳೆಯಾಗಿ ಬಿಡಿಸಿಡುವಲ್ಲಿ ಅಂಶಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರ ಆದಿವಾಸಿಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಸವಲತ್ತುಗಳ ಸದ್ಬಳಕೆಯಾಗುವಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದರು. ಶಾಸಕ ಎಚ್.ಪಿ. ಮಂಜುನಾಥ್ ಸಮಾರಂಭವನ್ನು ಉದ್ಘಾಟಿಸಿದರು.
ವನ್ಯಜೀವಿ ಛಾಯಾಗ್ರಾಹಕ ಕೃಪಾಕರ, ಡೀಡ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್. ಶ್ರೀಕಾಂತ್,  ರೋಟರಿ ಅಧ್ಯಕ್ಷ ಶಿವಕುಮಾರ್ ವಿ. ರಾವ್ , ಕೃತಿಯ ಕರ್ತೃ ಅಂಶಿ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: