ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ: ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಮೈಸೂರು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ತಮ್ಮ ಕಾಂಗ್ರೆಸ್ ಸದಸ್ಯತ್ವದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಅಕ್ಟೋಬರ್ 17 ರಂದು ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.

ನಂಜನಗೂಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ. ಶ್ರೀನಿವಾಸ್ ಪ್ರಸಾದ್, “ಕಾಂಗ್ರೆಸ್ ಪಕ್ಷದಲ್ಲಿದ್ದೇ ಎಲ್ಲವನ್ನೂ ಹೇಳಲಾಗದು. ಏನಾದರೂ ತಿಳಿಸಬೇಕೆಂದರೆ ಪಕ್ಷದಿಂದ ಹೊರಬರಬೇಕು” ಎನ್ನುವ ಮೂಲಕ ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ. ನನ್ನ ಜೀವನದಲ್ಲಿ ಎಂದು ಮರೆಯಲಾರದ ರೀತಿಯಲ್ಲಿ ನನ್ನ ಜೊತೆ ನಡೆದುಕೊಳ್ಳಲಾಗಿದೆ. ಹೈಕಮಾಂಡ್ ಗೂ ಈ ಕುರಿತು ತಿಳಿಸಿದ್ದೇನೆ. ಹೈಕಮಾಂಡ್ ಕೂಡ ಅಸಹಾಯಕವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ನನಗೆ ಸ್ವಾಭಿಮಾನವಿದೆ ಎಂದ ಅವರು, ನನ್ನ ಸಚಿವ ಸ್ಥಾನ ಹೋಗಲು ಸಿದ್ದರಾಮಯ್ಯನವರೇ ಕಾರಣ ಎನ್ನುವ ಮೂಲಕ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಯಾಕೆ ಆ ಮಟ್ಟಕ್ಕೆ ಹೋದರು ಎನ್ನುವುದೇ ಅರ್ಥವಾಗುತ್ತಿಲ್ಲ.  ಅವರು ಯಾವತ್ತೂ ನನ್ನ ಇಲಾಖೆಯ ಕುರಿತು ಪ್ರಸ್ತಾಪಿಸಿಲ್ಲ. ಕ್ಷೇತ್ರದ ಕುರಿತು ಪ್ರಸ್ತಾಪಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಒಳ್ಳೆಯ ಕೆಲಸಗಳನ್ನೇ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಗಳಿಲ್ಲ. 42 ವರ್ಷಗಳಲ್ಲಿ ಯಾವುದೇ ಆಪಾದನೆ ಇಲ್ಲ. ನನಗೆ ಅಪಾರ ಜನಬೆಂಬಲವಿದೆ. ಮಂತ್ರಿಮಂಡಲ ಪರಿಣಾಮಕಾರಿಯಾಗಿರಬೇಕು ಎಂದು ನನ್ನನ್ನು ಸಚಿವ ಸ್ಥಾನದಿಂದ ತೆಗೆಯಲಾಯಿತು. ಖರ್ಗೆ ಮಗನನ್ನು ಮಂತ್ರಿಮಂಡಲಕ್ಕೆ ನೇಮಕ ಮಾಡಿಕೊಳ್ಳಲಾಯಿತು. ಖರ್ಗೆ ಮಗ ನನಗಿಂತಲೂ ಪರಿಣಾಮಕಾರಿಯಾ? ಅಥವಾ ಅವರು ನನಗಿಂತಲೂ ಹಿರಿಯರಾ ಎಂದು ತಮ್ಮ ಕೋಪ ಹೊರ ಹಾಕಿದರು. ಸಿದ್ದರಾಮಯ್ಯನವರಿಗೆ ಏನೋ ದ್ವೇಷವಿದೆ. ಈ ಕುರಿತು ಮಾತನಾಡಲು ಬಹಳಷ್ಟಿದೆ ಆದರೆ ಅದಕ್ಕೂ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದರು.

ರಾಜೀನಾಮೆ ನೀಡಿದ ನಂತರ ಮೊದಲು ನಂಜನಗೂಡಿನಲ್ಲಿಯೇ ಸಭೆ ನಡೆಸಲಿದ್ದೇನೆ. ಸಿದ್ದರಾಮಯ್ಯನವರು ಮರೆತಿದ್ದಾರೆ ಬಸವಕಲ್ಯಾಣದಲ್ಲಿ ಅವರ ಅಹಿಂದಕ್ಕೆ ಚಾಲನೆ ಕೊಟ್ಟಿದ್ದು ಶ್ರೀನಿವಾಸ ಪ್ರಸಾದ್ ಒಬ್ಬರೇ ಎನ್ನುವುದನ್ನು ಅವರು ನೆನಪು ಮಾಡಿಕೊಳ್ಳಲಿ. ಅಧಿಕಾರದ ಆಸೆಯಿಂದ ನಾನು ರಾಜೀನಾಮೆ ಕೊಡುತ್ತಿಲ್ಲ. ಸಮರ್ಪಕವಾಗಿ ಕೆಲಸ ನಿರ್ವಹಿಸುವ ನನ್ನ ಕುರಿತು ಜನತೆಗೆ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.

Leave a Reply

comments

Related Articles

error: