ಕರ್ನಾಟಕ

ಬೆಳೆ ವಿಮೆ ಮತ್ತು ಫಸಲ್ ಭೀಮಾ ಯೋಜನೆ : ಶೀಘ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

ಮಡಿಕೇರಿ, ಜೂ.29 : ಇಂದು ಕೃಷಿ ಬೆಳೆಗಳಿಗೂ ವಿಮೆ ಮಾಡಿಸುವುದು ಅತ್ಯಗತ್ಯವಾಗಿದ್ದು, ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹವಾಮಾನ ಆಧಾರಿತ ಬೆಳೆ ವಿಮೆ ಅನುಷ್ಠಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ (ಕಾಳುಮೆಣಸು ಮತ್ತು ಅಡಿಕೆ) ವಿಮೆಗೆ ಹೆಸರು ನೋಂದಾಯಿಸಲು ಜೂನ್ 30 ಕಡೆ ದಿನವಾಗಿದೆ. ಹಾಗೆಯೇ ಪ್ರಧಾನಮಂತ್ರಿ ಫಸಲ್ ಭೀಮಾ (ಭತ್ತ, ಮುಸುಕಿನ ಜೋಳ) ಯೋಜನೆಯಡಿ ಹೆಸರು ನೋಂದಾಯಿಸಲು ಜುಲೈ 15 ಕೊನೆಯ ದಿನವಾಗಿದೆ. ಆದ್ದರಿಂದ ಈ ಬಗ್ಗೆ ತಮ್ಮ ವ್ಯಾಪ್ತಿಯ ರೈತರಿಗೆ ಅಗತ್ಯ ಮಾಹಿತಿ ನೀಡಿ ಹೆಸರು ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ಮಾಹಿತಿ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಿ ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ರೈತರಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸರ್ಕಾರದ ಯೋಜನೆಗಳು ಸಫಲವಾಗಲು ರೈತರಲ್ಲಿ ಹುರಿದುಂಬಿಸುವ ಕೆಲಸವಾಗಬೇಕು. ಈ ಸಂಬಂಧ ಕರಪತ್ರ ಮುದ್ರಣ ಮಾಡಿ ಮಾಹಿತಿ ಒದಗಿಸಬೇಕೆಂದರು. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಇದೊಂದು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಯೋಜನೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಬಿ.ಆರ್.ಗಿರೀಶ್ ಮಾತನಾಡಿ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದರು. ಅದರಂತೆ ಕೊಡಗು ಜಿಲ್ಲೆಯಲ್ಲಿ ಈ ಯೋಜನೆಯನ್ನು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಅಡಿಕೆ(ಭಾಗಮಂಡಲ, ಸಂಪಾಜೆ, ಅಮ್ಮತ್ತಿ, ಪೊನ್ನಂಪೇಟೆ ಮತ್ತು ಶ್ರೀಮಂಗಲ) ಮತ್ತು ಕಾಳುಮೆಣಸು (ಜಿಲ್ಲೆಯ 16 ಹೋಬಳಿ ವ್ಯಾಪ್ತಿಯಲ್ಲಿ) ಬೆಳೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ ಅಗತ್ಯ ಮಾಹಿತಿ ನೀಡಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕಿದೆ ಎಂದು ಉಪ ನಿರ್ದೇಶಕರು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ವರ್ಷದ ಭತ್ತ ಬೆಳೆಗೆ ವಿಮೆ ಪಾವತಿಸಲು ಸಂಬಂಧಿಸಿದ ವಿಮಾ ಕಂಪನಿಗೆ ಸುಮಾರು 27 ಲಕ್ಷ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ರೈತರು ವಿಮೆ ಸಂಬಂಧ ಭತ್ತ, ನೀರಾವರಿ, ಎಕರೆಗೆ 680 ರೂ., ಹೆಕ್ಟೇರ್‍ಗೆ 1,700 ರೂ., ಭತ್ತ ಮಳೆಯಾಶ್ರಿತ ಎಕರೆಗೆ 430 ರೂ. ಹೆಕ್ಟೇರ್‍ಗೆ 1080 ರೂ., ಮುಸುಕಿನ ಜೋಳ ಮಳೆಯಾಶ್ರಿತ ಎಕರೆಗೆ 400 ರೂ., ಹೆಕ್ಟೇರ್‍ಗೆ 1,000 ರೂ. ವಿಮಾಪ್ರೀಮಿಯಂ ಮೊತ್ತ ಪಾವತಿಸಬೇಕಿದೆ ಎಂದು ಅವರು ತಿಳಿಸಿದರು.
ಸಹಕಾರ ಇಲಾಖೆಯ ಉಪ ನಿಬಂಧಕರಾದ ವಿಜಯ್ ಕುಮಾರ್, ಡಿಸಿಸಿ ಬ್ಯಾಂಕ್ ಕಾರ್ಯದರ್ಶಿ ಅವರು ಹಲವು ಮಾಹಿತಿ ನೀಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಸಿಇಓಗಳು ಮಾತನಾಡಿ ಹವಾಮಾನ ಆಧಾರಿತ ಬೆಳೆ ವಿಮೆ ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಮಾಹಿತಿ ಕೊರತೆಯಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಬೇಕಿದೆ ಎಂದರು.  (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: