ಕರ್ನಾಟಕ

ಪ್ರತಿಯೊಬ್ಬರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು: ಕಂಡ್ರತಂಡ ಪಾಲಿ ಮಾದಪ್ಪ

ಮಡಿಕೇರಿ, ಜೂ.29 : ಪ್ರತಿಯೊಬ್ಬರು ತಾವಿರುವ ಕ್ಷೇತ್ರದಲ್ಲೇ ಕರ್ತವ್ಯ ನಿಷ್ಠೆ ಪ್ರದರ್ಶಿಸಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಮುಂಬೈನ ಎಸ್‍ಎಸ್‍ಸಿ ಮತ್ತು ಹೆಚ್‍ಎಸ್‍ಸಿ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕಂಡ್ರತಂಡ ಪಾಲಿ ಮಾದಪ್ಪ ಕರೆ ನೀಡಿದ್ದಾರೆ.

ನಗರದ ಕೊಡವ ಸಮಾಜದಲ್ಲಿ ಬುಧವಾರ ನಡೆದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡು ಅವರು ಮಾತನಾಡಿದರು. ನಾಯಕರೆಂದರೆ ಕೇವಲ ರಾಜಕೀಯ ನಾಯಕತ್ವವೇ ಆಗಬೇಕೆಂದೇನಿಲ್ಲ. ತಾವಿರುವ ಕ್ಷೇತ್ರದಲ್ಲೇ ತಮ್ಮ ಜವಬ್ದಾರಿಯನ್ನು ನಿಭಾಯಿಸಿ ವಿಶ್ವಾಸ ಮೂಡಿಸುವ ಮೂಲಕ ನಾಯಕತ್ವವನ್ನು ಹೊಂದಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಮತ್ತು ನಾಯಕತ್ವದ ಗುಣಕ್ಕಾಗಿ ಮಾನಸಿಕ ಹಾಗೂ ದೈಹಿಕವಾಗಿ ತಯಾರಿಯನ್ನು ನಡೆಸಬೇಕೆಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶವನ್ನು ಮುನ್ನಡೆಸಲು ಉತ್ತಮ ನಾಯಕರ ಅಗತ್ಯವಿದ್ದು, ವಿದ್ಯಾರ್ಥಿಗಳೇ ದೇಶವನ್ನು ಮುನ್ನಡೆಸುವ ನಾಯಕರಾಗಿ ರೂಪುಗೊಳ್ಳಬೇಕು ಎಂದು ಕಂಡ್ರತಂಡ ಪಾಲಿ ಮಾದಪ್ಪ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷರಾದ ಕೊಂಗಂಡ ಎಸ್.ದೇವಯ್ಯ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮೊದಲು ದೇಶ ನಂತರ ನಾವು ಎನ್ನುವ ಮನೋಭಾವನೆ ಬೆಳೆಯಬೇಕೆಂದರು. ವಿದ್ಯಾರ್ಥಿಗಳು ಸ್ಫೂರ್ತಿದಾಯಕ ಕನಸುಗಳನ್ನು ಕಾಣುವ ಮೂಲಕ ಮಹತ್ವದ್ದನ್ನು  ಸಾಧಿಸಬೇಕೆಂದರು. ತಿಮ್ಮಯ್ಯ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭ 2015-16ನೇ ಸಾಲಿನಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ವಿಜ್ಞಾನ, ರಸಪ್ರಶ್ನೆ, ಕಲೆ ಸೇರಿದಂತೆ ವಿವಿಧ ಕ್ಲಬ್‍ಗಳನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: