ಕ್ರೀಡೆಪ್ರಮುಖ ಸುದ್ದಿ

ಮಂದಾನ ಅಬ್ಬರಕ್ಕೆ ಕೆರಿಬಿಯನ್ ವನಿತೆಯರು ಕಂಗಾಲು: ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ

ಪ್ರಮುಖ ಸುದ್ದಿ, ಕ್ರೀಡೆ, ಟೌಂಟಾನ್, ಜೂ.30: ಮಹಿಳಾ ವಿಶ್ವಕಪ್ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಅಭಿಯಾನ ಮುಂದುವರಿಸಿದೆ.

ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 183ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಮಿಥಾಲಿ ರಾಜ್‌ ಪಡೆ 42.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿ ವಿಜಯದ ನಗೆ ಬೀರಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(106)ಅತ್ಯಮೋಘ ಶತಕ ಸಿಡಿಸಿ ಜಯದ ರೂವಾರಿಯಾದರು. ಗುಲಭ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಆಟಗಾರ್ತಿ ಪೂನಂ ರಾವತ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್ ಗಿಳಿದ ದೀಪ್ತಿ ಶರ್ಮಾ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಮಂದಾನ ಜೊತೆಯಾದ ನಾಯಕಿ ಮಿಥಾಲಿ ರಾಜ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಮೋಘ ಆಟವಾಡಿದ ಮಂದಾನ 108 ಎಸೆತಗಳಲ್ಲಿ 13ಬೌಂಡರಿ ಮತ್ತು 2ಸಿಕ್ಸರ್ ಒಳಗೊಂಡ  106 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಥಾಲಿ ರಾಜ್ 46 ರನ್ ಗಳಿಸಿ ಅರ್ಧಶತಕದಿಂದ ವಂಚಿತರಾದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಕೆರಿಬಿಯನ್ ವನಿತೆಯರು ಭಾರತದ ವನಿತೆಯರ ದಾಳಿಗೆ ತತ್ತರಿಸಿ ಹೋದರು. ದೀಪ್ತಿ ಶರ್ಮಾ (27ಕ್ಕೆ2), ಪೂನಂ ಯಾದವ್‌ (19ಕ್ಕೆ2) ಮತ್ತು ಹರ್ಮನ್‌ ಪ್ರೀತ್ ಕೌರ್ (42ಕ್ಕೆ2) ದಾಳಿಗೆ ತತ್ತರಿಸಿ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಂಡೀಸ್ ಪಡ ಹೇಲಿ ಮ್ಯಾಥ್ಯೂಸ್ 43, ಶಾನೆಲ್ ಡೆಲೆ 33 ಮತ್ತು ಆಯಫಿ ಫ್ಲೆಚರ್ ಔಟಾಗದೆ 36 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ ಯಾರೊಬ್ಬರು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಆಕರ್ಷಕ ಶತಕ ಸಿಡಿಸಿದ ಸ್ಮೃತಿ ಮಂದಾನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. (ವರದಿ ಬಿ.ಎಂ)

 

Leave a Reply

comments

Related Articles

error: