ಮೈಸೂರು

ಅನ್ನಭಾಗ್ಯ ಅನಂತಯಾತ್ರೆ ವಿಶೇಷ ಆಂದೋಲನ

ಮೈಸೂರು,ಜೂ.30-ಪಡಿತರ ಚೀಟಿಗಳು ಮತ್ತು ಪಡಿತರ ವಿತರಣೆಗೆ ಸಂಬಂಧಿಸಿದಂತೆ ಇರುವ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಹಾಗೂ ಜನರ ಸಮಸ್ಯೆಗಳಿಗೆ ಜನರ ಮನೆಯ ಬಾಗಿಲ ಮುಂದೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತವು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ `ಅನ್ನಭಾಗ್ಯ ಅನಂತಯಾತ್ರೆ’ ಎಂಬ ವಿಶೇಷ ಆಂದೋಲನವನ್ನು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದೆ.

ಅನ್ನಭಾಗ್ಯ ಅನಂತಯಾತ್ರೆ ವಿಶೇಷ ಆಂದೋಲನದಲ್ಲಿ ಪಡಿತರ ಚೀಟಿ ಹೊಂದಿಲ್ಲದವರಿಂದ ಹೊಸ ಪಡಿತರ ಚೀಟಿಗಾಗಿ ಆನ್‍ಲೈನ್ ಅರ್ಜಿ ಸ್ವೀಕಾರ (ಬಿಪಿಎಲ್ & ಎಪಿಎಲ್), ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಆನ್‍ಲೈನ್ ಅರ್ಜಿಗಳನ್ನು ಸ್ಥಳದಲ್ಲಿ ಇತ್ಯರ್ಥ ಪಡಿಸುವುದು, ಪಡಿತರ ಚೀಟಿಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು, ಪಡಿತರ ವಿತರಣೆಗೆ ಸಂಬಂಧಿಸಿದ ವಿಷಯಗಳ ಪರಿಶೀಲನೆ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಇತರೆ ವಿಷಯಗಳು, ಆಧಾರ್‍ಗೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಗೊಳಿಸಲಾಗುವುದು.

ಅನ್ನಭಾಗ್ಯ ಅನಂತ ಯಾತ್ರೆ ವಿಶೇಷ ಆಂದೋಲನದ ಅಂತಿಮ ರೂಪರೇಷೆ ತಯಾರಿಸುವ ಮುನ್ನ ಆಹಾರ ಇಲಾಖೆ ವತಿಯಿಂದ ಪ್ರಾಯೋಗಿಕ ಕಾರ್ಯಕ್ರಮವನ್ನು ಜೂ.30 ರಂದು ಮಧ್ಯಾಹ್ನ 12 ಗಂಟೆಗೆ ಭೀಮನಹಳ್ಳಿ ಹಾಡಿಯಲ್ಲಿ ಅನ್ನಭಾಗ್ಯ ಜನಸಂಪರ್ಕ ಕಾರ್ಯಕ್ರಮ ನಡೆಸಲಾಗುವುದು. ಈ ಹಾಡಿಗಳಲ್ಲಿ ಅನ್ನಭಾಗ್ಯ ಕಾರ್ಯಕ್ರಮವನ್ನು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ.

ಜು.4 ರಂದು ತಾಲ್ಲೂಕುಗಳಲ್ಲಿ ಒಂದು ಗ್ರಾಮ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅನ್ನಭಾಗ್ಯ ಅನಂತಯಾತ್ರೆ ಪ್ರಾಯೋಗಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: