Uncategorizedಮೈಸೂರು

ಪುಷ್ಪ ಹಿಂದಿ ವಿದ್ಯಾಲಯದ 25ನೇ ವರ್ಷದ ವಾರ್ಷಿಕೋತ್ಸವ

ನಗರದ ಜಗನ್ಮೋಹನ ಅರಮನೆಯಲ್ಲಿ ಪುಷ್ಪ ಹಿಂದಿ ವಿದ್ಯಾಲಯದ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಬುಧವಾರ ಆಯೋಜಿಸಲಾಗಿತ್ತು.

ಇದೇ ವೇಳೆ ಮಾನಸ ಗಂಗೋತ್ರಿಯ ಎನ್‌ಸಿಇಆರ್‌ಟಿ ಪ್ರೊ.ವೆಂಕಟೇಶ ಮೂರ್ತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರ್ತಿಸಿ, ಪ್ರೋತ್ಸಾಹ ನೀಡುವ ಕಡೆ ಮನಸ್ಸು ಮಾಡಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಾಮಾಜಿಕ ವಾತಾವರಣ ನಿರ್ಮಾಣ ಮಾಡಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆದು ಕುಟುಂಬಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡಲು ಮುಂದಾಗುತ್ತಾರೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳಿಗೆ ಸಹಕಾರದ ಜೊತೆಗೆ ಧೈರ್ಯ ತುಂಬುವ ಪ್ರಯತ್ನ ಮಾಡಿ ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ತಾವು ತಿಳಿದ ವಿಷಯದ ಬಗ್ಗೆ ತಮ್ಮ ವಿದ್ಯಾರ್ಥಿಗಳಿಗೆ ಬರಿ ಮಾಹಿತಿ ನೀಡುತ್ತಾರೆ ವಿನಹ, ಅವರು ವಿಚಾರವನ್ನು ಧಾರೆ ಎರೆಯಲು ಸಾಧ್ಯವಿಲ್ಲ. ಇಂದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಿಕ್ಷಣದ ಪಾಠ ಪ್ರವಚನದಲ್ಲಿ ಬದಲಾವಣೆ ಅತಿಮುಖ್ಯವಾಗಿದೆ. ಮಕ್ಕಳ ಬುದ್ಧಿ ಸಾಮರ್ಥ್ಯಕ್ಕೆ ಅನುಗುಣವಾಗಿ ಯುವ ಪೀಳಿಗೆಯ ಶಿಕ್ಷಕರನ್ನು ನೇಮಿಸಬೇಕಾಗಿದೆ ಎಂದು ತಿಳಿಸಿದರು.

ನಮ್ಮ ವಿಫಲತೆ ಮತ್ತು ಅಪನಂಬಿಕೆಯಿಂದ ಅಮೂಲ್ಯ ಸಂಬಂಧವನ್ನು ನಾಶ ಮಾಡಿಕೊಂಡು ಸಮಾಜದಿಂದ ದೂರ ಉಳಿಯಲು ಬಯಸುತ್ತೇವೆ. ನಾವು ಈ ಸಮಸ್ಯೆಯಿಂದ ಹೊರಬರಬೇಕಾದರೆ ಮೊದಲು ಮಾನವೀಯತೆಯ ಗುಣವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.

ಡಾ.ಪುಷ್ಪ ಅವರ ಅಸೆಸ್‌ಮೆಂಟ್ ಫಾರ್ ಲರ್ನಿಂಗ್ ಎಂಬ ಪುಸ್ತಕವನ್ನು ಪ್ರೊ.ಪ್ರತಿಭಾ ಮೊದಲಿಯಾರ್ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಪುಷ್ಪ ಹಿಂದಿ ವಿದ್ಯಾಲಯದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯ ಹಿಂದಿ ವಿಭಾಗದ ಪ್ರೊ.ಪ್ರತಿಭಾ ಮೊದಲಿಯಾರ್, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷೆ ಪ್ರೊ.ಅಮರಜ್ಯೋತಿ, ಪುಷ್ಪ ಹಿಂದಿ ವಿದ್ಯಾಲಯದ ಸಂಸ್ಥಾಪಕಿ ಡಾ.ಪುಷ್ಪ, ನಿವೃತ್ತ ಇಂಜಿನಿಯರ್ ಕರಿಯಪ್ಪ ಕಾರ್ಯಕ್ರಮದಲ್ಲಿ ಇದ್ದರು.

 

Leave a Reply

comments

Related Articles

error: