ಮೈಸೂರು

ಸಮಾನ ಶಿಕ್ಷಣ ನೀಡಿದಾಗ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ: ಸಿಎಂ ಸಿದ್ದರಾಮಯ್ಯ ಅಭಿಮತ

ಸಮಾಜದ ಕೆಳವರ್ಗದವರು, ಬಡವರು, ದೀನದಲಿತರು, ಹಿಂದುಳಿದವರೆಲ್ಲರಿಗೂ ಬಡವ ಬಲ್ಲಿದರೆನ್ನದೆ ಸಮಾನ ಶಿಕ್ಷಣ ನೀಡಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಗರದ ಮಹದೇವಪುರ ರಸ್ತೆಯ ಜಲಪುರಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಿಸಿರುವ ನರ್ಸರಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಣ ಕ್ಷೇತ್ರದಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿರುವ ಕೆಳಹಂತದ ಸಿಬ್ಬಂದಿ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅವರ ಕನಸನ್ನು ನನಸು ಮಾಡಿ ಅವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳನ್ನು ರಾಜ್ಯದಲ್ಲಿರುವ ಎಲ್ಲಾ ಏಳು ಪೊಲೀಸ್ ರೇಂಜ್‌ಗಳಲ್ಲೂ ಆರಂಭಿಸಲಾಗಿದೆ ಎಂದರು.

ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಬುದ್ದಿವಂತರಾಗುತ್ತಾರೆ ಎಂಬುದು ಅರ್ಧ ಸುಳ್ಳು ಅರ್ಧ ಸತ್ಯ. ತಮ್ಮ ಅಪಾರ ಬುದ್ಧಿಶಕ್ತಿಯಿಂದ ವಿಶ್ವದೆಲ್ಲೆಡೆ ಜನಮನ್ನಣೆ ಗಳಿಸಿರುವ ಸಿ.ಎನ್.ಆರ್.ರಾವ್, ಸರ್.ಎಂ ವಿಶ್ವೇಶ್ವರಯ್ಯ, ಎಪಿಜೆ ಅಬ್ದುಲ್ ಕಲಾಂ ಓದಿದ್ದು ಸರ್ಕಾರಿ ಶಾಲೆಯಲ್ಲಿ. ನಾನೂ ಕೂಡ ಸರ್ಕಾರಿ ಶಾಲೆಯಲ್ಲೇ ಓದಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ ಎಂಬಂತೆ ಬೆಳೆಯುತ್ತಿದೆ. 65 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, 1 ಕೋಟಿ 20 ಲಕ್ಷ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶ ಕೊರತೆ ಕಾಡದಿರಲಿ ಎಂಬ ಉದ್ದೇಶದಿಂದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಹಣೆಬರಹ ಗಿಣೆಬರಹ ಏನೂ ಇಲ್ಲ: ಬ್ರ್ರಾಹ್ಮಣತ್ವ ಮಾಡುವವರು ನೂರಾರು ವರ್ಷಗಳಿಂದಲೂ ಶೂದ್ರರನ್ನು ಶಿಕ್ಷಣದಿಂದ ದೂರವಿಟ್ಟು, ನಿಮ್ಮ ಹಣೆಬರಹ ಸರಿಯಿಲ್ಲ, ನೀವು ದಡ್ಡರು ಎಂದು ಅವರನ್ನು ದೂಷಿಸುತ್ತಾರೆ. ಆದರೆ ಯಾವ ಹಣೆಬರವೂ ಇಲ್ಲ. ದೇವರು ಹುಟ್ಟುವಾಗಲೇ ನೀನು ಬಡವನಾಗು, ಶೂದ್ರನಾಗು, ಕೆಳವರ್ಗದಲ್ಲಿ ಹುಟ್ಟು, ಮೇಲ್ವರ್ಗದಲ್ಲಿ ಹುಟ್ಟು ಎಂದು ಹಣೆ ಮೇಲೆ ಬರೆಯುವುದಿಲ್ಲ. ದೇವರಿಗೆ ಎಲ್ಲರೂ ಸಮಾನರು. ರಾಮಾಯಣ, ಮಹಾಭಾರತ ರಚಿಸಿದರು ಕೂಡ ಶೂದ್ರರೆ. ನನಗೆ ನೇರವಾಗಿ 5ನೇ ತರಗತಿಗೆ ಪ್ರವೇಶ ನೀಡಿ ಶಿಕ್ಷಣ ನೀಡಿಲ್ಲದಿದ್ದರೆ ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.

ಶಿಕ್ಷಣ ಕೇವಲ ಒಂದು ಜಾತಿಗೆ ಸೀಮಿತವಲ್ಲ. ಬುದ್ಧಿವಂತಿಕೆ ಇಂತಹ ಜಾತಿಯವರಲ್ಲೇ ಇರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದರೆ ಎಲ್ಲರೂ ಬುದ್ಧಿವಂತರಾಗುತ್ತಾರೆ. ಆ ದಿಸೆಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್‌ಟಿಇ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಶಿಕ್ಷಣ ವಾಣಿಜ್ಯೀಕರಣವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಇದೇ ಮೊದಲಬಾರಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಇಂತಹ ಶಾಲೆಯನ್ನು ನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂದು ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಕೇವಲ ಧನಿಕರಿಗೆ ಎಂಬಂತಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುತ್ತಿಲ್ಲ. ಆ ನಿಟ್ಟಿನಲ್ಲಿ ಸಮಾಜದ ಎಲ್ಲರಿಗೂ ಸಮಾನ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಪ್ಪಿಸಲು ಡಿಸೆಂಬರ್ ವೇಳೆಗೆ ತರಗತಿವಾರು ಶುಲ್ಕ ನಿಗದಿಪಡಿಸಿ ಇಲಾಖೆಗೆ ತಿಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿದ್ದು 27 ಪಠ್ಯವಾರು ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ತಾಲೂಕು ಮಟ್ಟದ ಶಾಲೆಗಳನ್ನು ದತ್ತು ಪಡೆದುಕೊಂಡು ಮೂಲ ಸೌಲಭ್ಯದೊಡನೆ ಗುಣಮಟ್ಟದ ಶಿಕ್ಷಣ ನೀಡಲು ಉದ್ದೇಶಿಸಲಾಗಿದ್ದು, ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಎಂಎಲ್‌ಸಿ ಆರ್.ಧರ್ಮಸೇನ, ಮೇಯರ್ ಬಿ.ಎಲ್.ಭೈರಪ್ಪ, ಗೃಹಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಡಿಜಿಪಿ ಸುಶಾಂತ್ ಮಹಾಪಾತ್ರ, ಎಡಿಜಿಪಿ ಸುನಿಲ್ ಕುಮಾರ್, ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್, ನಗರ ಪೊಲೀಸ್ ಆಯುಕ್ತ ದಯಾನಂದ್, ಎಸ್‌ಪಿ ರವಿ ಡಿ.ಚೆನ್ನಣ್ಣವರ್, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: