ಮೈಸೂರು

ಹಂಗಿನರಮನೆಯಿಂದ ಪಾರು ಮಾಡಿದ ಜೀವನ ಛಲ

ಸುಕ್ಕಾದ ಮೈ, ನಡುಗುವ ಕೈ, ಬಲಹೀನ ಕಾಲುಗಳು, ಮಾಗಿದ ಮನಸು, ಆ ಮನಸ್ಸಿನಲ್ಲಿ ಅದಮ್ಯ ಚೈತನ್ಯ, ಬದುಕಿನೊಂದಿಗೆ ಹೋರಾಡುವ ಛಲ, ಇವರಿಗೆ ಯೋಗ ಬೇಕಿಲ್ಲ, ರೋಗದ ಸುಳಿವಿಲ್ಲ. ಬದಲಾಗುತ್ತಿರುವ ಕೌಟುಂಬಿಕ ಮೌಲ್ಯಗಳ ಕುಸಿತದ ಒತ್ತಡಕ್ಕೀಡಾದರೂ ಜೀವನ ಸ್ಫೂರ್ತಿ ಕಳೆದುಕೊಂಡವರಲ್ಲ ಇವರು. ಈಸಬೇಕು-ಇದ್ದು ಜಯಿಸಬೇಕು ಎನ್ನುವುದು ಇವರ ಬದುಕಿನ ಮಂತ್ರ.

ಆಗ ತಾನೆ ಸೂರ್ಯ ತನ್ನ ಪ್ರಭಾವ ಆರಂಭಿಸಲು ಶುರುವಿಟ್ಟ ಸಮಯ. ಮಾರಮ್ಮ(80) ವೃತ್ತಿಗಿಳಿದು ಅದಾಗಲೇ ಸುಮಾರು ಹೊತ್ತಾಗಿತ್ತು. ಯಾರಿಗೂ ಬೇಕಿಲ್ಲದ ಕಸವೇ ಇವರಿಗೆ ಆಧಾರ. ಕಸದಲ್ಲಿರುವ ಕಬ್ಬಿಣದ ತುಂಡುಗಳನ್ನು ಕೂಡಿ ಹಾಕಿ ಮಾರಿ ಹೊಟ್ಟೆ ಹೊರೆಯುವರು. ಆದ್ರೆ ಇವರು ರದ್ದಿ ಆಯುವವರಲ್ಲ. ಬದಲಿಗೆ ಕಬ್ಬಿಣದ ವಸ್ತುಗಳನ್ನು ಕಲೆ ಹಾಕಿ ಮಾರುವವರು. ಮಕ್ಕಳಿದ್ದರೂ ಅವರ ಹಂಗಿಗೆ ಬೀಳದೆ ಸ್ವಾಭಿಮಾನಿಯಾಗಿ ಕಳೆದ 30 ವರ್ಷದಿಂದ ಜೀವನ ಸಾಗಿಸುತ್ತಿದ್ದಾರೆ. ಸಿಲ್ಕ್ ಫ್ಯಾಕ್ಟರಿಯಲ್ಲಿ ವಾಸ.

ಸುಣ್ಣ ಮಾರುವ ನಾಗಮ್ಮ (65) ಗುಂಡ್ಲುಪೇಟೆ ಹುಟ್ಟೂರಾದರೂ ಜೀವನ ಎಳೆದು ತಂದಿದ್ದು ಮೈಸೂರಿಗೆ. ದೇವರಾಜ ಮಾರುಕಟ್ಟೆಯಲ್ಲಿ ಗಂಡ ವ್ಯಾಪಾರ ಮಾಡುತ್ತಿದ್ದ. ಅವನು ತೀರಿಹೋದ ಮೇಲೆ ಸಂಸಾರದ ನೊಗ ಹೊತ್ತು ಸಾಗಿಸಿದರು. ಇಂದಿಗೂ ವೃತ್ತಿಯಿಂದ ನಿವೃತ್ತಿ ಹೊಂದಿಲ್ಲ. ಮಕ್ಕಳು ತಮ್ಮ ತಮ್ಮ ಜೀವನ ಹುಡುಕಿ ಗೂಡು ತೊರೆದವರೆ.

ಮೀನು ಮಾರುವ ನಾಗಮ್ಮ (67) ಎಲ್ಲರದು ಒಂದೇ ಕಥೆಯ ವಿವಿಧ ಪುಟಗಳು ಅಷ್ಟೇ. ಎಲ್ಲರೂ ಮಕ್ಕಳಿಂದ ತಿರಸ್ಕೃತರಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವವರು.

ಹಲ್ಲು ಉದುರಿದ ಬೊಚ್ಚು ಬಾಯಿ, ಕೈ ನಡುಕ, ಕಾಲುಗಳ ಎಲುಬುಗಳು ಸವೆದಿರುವ ಗೋಪಮ್ಮ(82) ನಂಜಮ್ಮಣ್ಣಿ ವೃತ್ತ ಬಳಿ ಬಿದುರಿನ ಬುಟ್ಟಿ ಹಾಕುತ್ತಾ ಜೀವನ ಸಾಗಿಸುತ್ತಿದ್ದಾರೆ. ಆರು ಜನ ಗಂಡು ಮಕ್ಕಳಿದ್ದರೂ ಇವರಿಗೆ ಕತ್ತಿಯೇ ಬಂಧು-ಬಳಗ. ಬುಟ್ಟಿ ಹೆಣೆಯುವ ಕೌಶಲವೇ ಆಧಾರ. ಇವೇ ಅವರ ಹೊಟ್ಟೆ ತುಂಬಿಸುತ್ತಿವೆ. ಯಾಂತ್ರಿಕ ಯುಗದಲ್ಲಿ ಬಿದಿರಿನ ಬಳಕೆಯು ಕಮ್ಮಿಯಾಗಿದ್ದು, ಪ್ಲಾಸ್ಟಿಕ್ ವಸ್ತುಗಳಿಗೆ ಜನ ಮಾರುಹೋಗುತ್ತಿದ್ದಾರೆ. ವಾರದಲ್ಲಿ ನಾಲ್ಕು ನೂರರಿಂದ ಐದು ನೂರು ರೂಪಾಯಿ ವ್ಯಾಪಾರ ಆಗಬಹುದು. ಅಷ್ಟರಲ್ಲಿಯೇ ಜೀವನ. ಯಾರಿದ್ದರೂ ಏನು ನಮಗೆ ನಾವೇ ಸ್ವಾಭಿಮಾನಿಯಾಗಿ ದುಡಿದು ಸ್ವತಂತ್ರವಾಗಿ ತಿನ್ನಬೇಕು ಎನ್ನುವುದು ಈಕೆ ಕಂಡುಕೊಂಡ ಜೀವನದ ಸತ್ಯ.

ಇವರ ಜೀವನ ಸ್ಫೂರ್ತಿ ನೋಡಿ, ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿಯಲ್ಲಿ ಫೇಲಾದೆವು ಎನ್ನುವ ಕಾರಣಕ್ಕೆ, ಪೋಷಕರು ಮೊಬೈಲ್, ಬೈಕ್ ಕೊಡಸಲಿಲ್ಲವೆನ್ನುವ ಸಣ್ಣ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವಷ್ಟು ಮಾನಸಿಕವಾಗಿ ದುರ್ಬಲರಾಗಿರುವ ಇಂದಿನ ಯುವಜನತೆ ಕಲಿಯಬೇಕಾದ್ದು ಬಹಳಷ್ಟಿದೆ.

rekha

ಎಷ್ಟೋ ಹೆಣ್ಣು ಮಕ್ಕಳು ಗಂಡ ತೀರಿದನೆಂದರೆ ಬದುಕೆ ಮುಗಿಯಿತೆಂದು ಆಕಾಶವೇ ಕಳಚಿದಂತೆ ಕೂರುವರು. ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಪ್ರತಿ ಹತ್ತು ಜನ ಹಿರಿಯ ನಾಗರಿಕರಲ್ಲಿ ಆರು ಜನ ತಮ್ಮ ಮಕ್ಕಳಿಂದಲೇ ಹೊರಹಾಕಲ್ಪಟ್ಟವರು, ಇಲ್ಲವೇ ಮಕ್ಕಳಿಂದ ಕಡೆಗಣಿಸಲ್ಪಟ್ಟವರು, ಪೋಷಕರ ಜವಾಬ್ದಾರಿಯನ್ನು ಹೊರಲು ನಿರಾಸಕ್ತಿ ತೋರುವರು. ಕೌಟುಂಬಿಕ ದೌರ್ಜನ್ಯಕ್ಕೊಳಗಾದವರು – ಆಸ್ತಿಗಾಗಿ ಬಡಿದಾಡುವ ಮಕ್ಕಳು. ಸಮಾಜದಲ್ಲಿ ಈ ರೀತಿಯ ಬೆಳವಣಿಗೆಗಳಿಂದ ವೃದ್ಧಾಪ್ಯವೆಂದರೆ ಬೆಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೂ, ಈಸಬೇಕು ಇದ್ದು ಜೈಸಬೇಕು ಎನ್ನುವುದು ನಾಗಮ್ಮ, ಗೊಪಮ್ಮ, ಸರಸ್ವತಮ್ಮ ಹಾಗೂ ಇವರಂತಹ ಸಾವಿರಾರು ಮಹಿಳೆಯರ ಮೂಲಮಂತ್ರ. ಮಹಿಳಾ ಸಬಲೀಕರಣದ ಮಾತುಗಳು ಕೇಳುತ್ತಿರುವಾಗ ಸ್ವಂತಶಕ್ತಿಯಿಂದ ದುಡಿಯುವ ಇವರ ಆತ್ಮಸ್ಥೈರ್ಯ ಪ್ರಶಂಸಾರ್ಹ. ಇವರ್ಯಾರೂ ಭಗವದ್ಗೀತೆಯ ಕರ್ಮಣ್ಯೇ ವಾಧೀಕಾರಸ್ತೆ ಮಾಫಲೇಷು ಕದಾಚನಾ ಅನ್ನುವುದನ್ನು ಓದಿದವರಲ್ಲ. ಆದರೆ ಜೀವನದಲ್ಲಿ ತಮಗರಿವಿಲ್ಲದೇ ಅಳವಡಿಸಿಕೊಂಡು ಬದುಕುತ್ತಿರುವವರು. ಛಲವೊಂದಿದ್ದರೆ ಎಂತಹ ಕಷ್ಟದ ಸಮಯವನ್ನೂ ಸರಿದೂಗಿಸಿಕೊಂಡು ಹೋಗಬಹುದು ಎಂಬದನ್ನು ಈ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ.

  • ರೇಖಾ ಪ್ರಕಾಶ್

Leave a Reply

comments

Related Articles

error: