ಮೈಸೂರು

ಚಾಲಕನನ್ನು ಮರಕ್ಕೆ ಕಟ್ಟಿ ರಸಗೊಬ್ಬರ ಲಾರಿ ಅಪಹರಣ ಪ್ರಕರಣ : ಮೂವರ ಬಂಧನ

ಮೈಸೂರು,(ಪಿರಿಯಾಪಟ್ಟಣ)ಜೂ.30:-ಗೊಬ್ಬರ ತುಂಬಿದ್ದ ಲಾರಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಲಾರಿ ಹಾಗೂ 300 ಚೀಲ ರಸಗೊಬ್ಬ ಮತ್ತು 4 ಬೈಕ್‍ಗಳು ಸೇರಿದಂತೆ ಒಟ್ಟು 13 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು  ಹುಣಸೂರಿನ ನಜರುಲ್ಲಾ, ಮಳವಳ್ಳಿಯ ಸುರೇಶ್, ಮತ್ತು ಮದ್ದೂರು ತಾಲೂಕಿನ ಕೊಪ್ಪದ ನವಾಬ್ ಖಾನ್ ಅಲಿಯಾಸ್ ನವಾಬ್ ಎಂದು ಗುರುತಿಸಲಾಗಿದೆ. ಜೂ.14ರಂದು ಹೊಳೆನರಸಿಪುರದ ಅಶೋಕ್ ಎಂಬುವವರು ಮೈಸೂರಿನ ಎಪಿಎಂಸಿಯಿಂದ 300 ಚೀಲ ರಸಗೊಬ್ಬವನ್ನು ತನ್ನ ಲಾರಿಯಲ್ಲಿ ತುಂಬಿಕೊಂಡು ತಾಲೂಕಿನ ಪಂಚವಳ್ಳಿ ಗ್ರಾಮದ ಅಂಗಡಿಯೊಂದಕ್ಕೆ ಪೂರೈಸಲು ಬಂದಿದ್ದರು. ಆದರೆ ತಡವಾಗಿ ಬಂದಿದ್ದರಿಂದ ಕೂಲಿಯಾಳುಗಳು ಸಿಗದ ಕಾರಣ ಚಾಲಕ ಲಾರಿಯನ್ನು ಅಂಗಡಿ ಮುಂದೆ ನಿಲ್ಲಿಸಿ ನಿದ್ರೆಗೆ ಜಾರಿದ್ದು, ಗುರುವಾರ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ 4 ಜನ ಮುಸುಕುಧಾರಿಗಳು ಲಾರಿ ಏರಿ ಚಾಲಕನನ್ನು ಬೆದರಿಸಿ ಕೈಕಾಲು ಕಟ್ಟಿ ಲಾರಿ ಚಾಲನೆ ಮಾಡಿಕೊಂಡು ಹುಣಸೂರು ಮಾರ್ಗವಾಗಿ ಹೊರಟಿದ್ದಾರೆ. ಹುಣಸೂರು ತಾಲೂಕಿನ ಕಲ್ಲಹಳ್ಳಿ ಬಳಿ ಚಾಲಕನನ್ನು ಮರಕ್ಕೆ ಕಟ್ಟಿ ಹಾಕಿ ರಸಗೊಬ್ಬರ ತುಂಬಿದ್ದ ಲಾರಿ ಸಮೇತ ಪರಾರಿಯಾಗಿದ್ದಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಚ್.ಎನ್.ಸಿದ್ದಯ್ಯ, ಪಿಎಸ್‍ಐ ಚೇತನ್, ಸಿಬ್ಬಂದಿಗಳಾದ ಇದಾಯತ್, ಪ್ರಭಾಕರ್, ಕಬೀರ್, ರುದ್ರೇಶ್, ಮಹದೇವಪ್ಪ, ಹಬೀಬುಲ್ಲಾಖಾನ್, ಮಂಜುನಾಥ್, ಕಾಂತರಾಜು, ಯೋಗೇಶ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: