ಕರ್ನಾಟಕ

ಮನ್‍ಮುಲ್ ಉಪವ್ಯವಸ್ಥಾಪಕ ದೇಶರಾಜು ಅವರಿಗೆ ಆತ್ಮೀಯ ಬೀಳ್ಕೊಡುಗೆ

ರಾಜ್ಯ(ಮಂಡ್ಯ)ಜೂ.30:-ಜೂನ್ 30ರಂದು ನಿವೃತ್ತರಾಗಲಿರುವ ಮನ್‍ಮುಲ್ ಉಪವ್ಯವಸ್ಥಾಪಕ ದೇಶರಾಜು ಅವರನ್ನು ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪ ಕಚೇರಿ ಪಾಂಡವಪುರ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ದೇಶರಾಜು ಅವರಿಗೆ ಚಿನ್ನದ ಉಂಗುರ ತೊಡಿಸಿ ಹಾರಹಾಕಿ,ಶಾಲು ಹೊದೆಸಿ ಗೌರವಿಸಿ ಬೀಳ್ಕೊಡಲಾಯಿತು. ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮಾತನಾಡಿ, ದೇಶರಾಜು ಓರ್ವ ಪ್ರಾಮಾಣಿಕ ಆಧಿಕಾರಿಯಾಗಿದ್ದು, ನಿವೃತ್ತಿಯ ನಂತರವೂ ಅವರ ಸೇವೆಯನ್ನು ಮುಂದುವರೆಸುವಂತೆ ಒಕ್ಕೂಟದಿಂದ ಭಾರಿ ಒತ್ತಡ ಬಂದಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ, ಅವರು ಇಚ್ಛಿಸಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು. ಮನ್ ಮುಲ್ ಉಪಾಧ್ಯಕ್ಷ ಗೌಡಗೆರೆ ಜಿ.ಇ. ರವಿಕುಮಾರ್ ಮಾತನಾಡಿ, ಇನ್ನೆರಡು ದಿನಗಳಲ್ಲಿ ನಿವೃತ್ತರಾಗಲಿರುವ ಮನ್‍ಮುಲ್ ಉಪವ್ಯವಸ್ಥಾಪಕ ದೇಶರಾಜು ಅವರು ಕಾರ್ಮಿಕರ ಅಥವಾ ಸಹಕಾರ ಸಂಘಗಳ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತಾರದೆ ತಮ್ಮ ಹಂತದಲ್ಲಿಯೇ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದರ ಮೂಲಕ ಮನ್ ಮುಲ್ ಘನತೆಯನ್ನು ಎತ್ತಿಹಿಡಿದಿದ್ದಾರೆ, ಜೊತೆಗೆ ನಮ್ಮ ತಾಲೂಕಿನಲ್ಲಿ ಹಾಲಿನ ಗುಣಮಟ್ಟವನ್ನು ಕಾಪಾಡುವುದರ ಮೂಲಕ ಮನ್‍ಮುಲ್‍ಗೆ ಉತ್ತಮ ಹೆಸರು ಗಳಿಸಿಕೊಟ್ಟಿದ್ದಾರೆ ಎಂದರು. ನಂತರ ದೇಶರಾಜು ಅವರನ್ನು ವಿವಿಧ ಸಹಕಾರ ಸಂಘಗಳ ಆಡಳಿತ ಮಂಡಳಿಯವರು ಗೌರವಿಸಿದರು.
ವೇದಿಕೆಯಲ್ಲಿ ಮನ್‍ಮುಲ್ ನಿರ್ದೇಶಕ ಡಾಲುರವಿ, ತಾ.ಪಂ.ಸದಸ್ಯ ನಿಂಗೇಗೌಡ, ಬಸವೆಗೌಡ, ಮಹೇಶ, ತಾಲೂಕು ಡೈರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಎಂ.ಸೋಮೆಗೌಡ, ಡಾ.ಸಂಜು, ಸುನಿಲ್ ಕುಮಾರ್, ಪ್ರತಾಪ್, ದಿವ್ಯ, ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: