ಕರ್ನಾಟಕ

ವಿಧಾನ ಸಭಾಧ್ಯಕ್ಷರ ತೀರ್ಪಿಗೆ ರವಿಕುಶಾಲಪ್ಪ ಆಕ್ಷೇಪ

ಮಡಿಕೇರಿ, ಜು.1: ಶಾಸಕರ ವಿರುದ್ಧ ಮಾನಹಾನಿಕರ ಲೇಖನಗಳನ್ನು ಬರೆದಿರುವುದಾಗಿ ಆರೋಪಿಸಿ ವಿಧಾನಸಭಾಧ್ಯಕ್ಷರಾದ ಕೋಳಿವಾಡ ಅವರು ಪತ್ರಕರ್ತರಾದ ರವಿಬೆಳೆಗೆರೆ ಮತ್ತು ಅನಿಲ್ ರಾಜ್ ಅವರನ್ನು ಸದನದ ಹಕ್ಕು ಬಾಧ್ಯತ ಸಮಿತಿಯ ಶಿಫಾರಸ್ಸು ಎಂಬ ಸಾಂವಿಧಾನಿಕ ಅಸ್ತ್ರವನ್ನು ಪ್ರಯೋಗಿಸಿ ತಪ್ಪಿಸ್ಥರೆಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸುವ ಕಠಿಣ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನಿಸಲು ಹೊರಟಿರುವುದು “ಮಾಧ್ಯಮ ಸಮೂಹಕ್ಕೆ” ಮಾಡುತ್ತಿರುವ ದ್ರೋಹವಾಗಿದೆ ಎಂದು ಆರೋಪಿಸಿದ್ದಾರೆ. ಕಾನೂನು ರೂಪಿಸುವ ಕೆಲಸ ಮಾಡಬೇಕಿರುವ ಶಾಸಕಾಂಗ ನ್ಯಾಯಾಂಗದ ಕೆಲಸವನ್ನು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಶಾಸಕಾಂಗ ಎನ್ನುವುದು ಜನಪ್ರತಿನಿಧಿಗಳ ಸಮೂಹ ಕಾರ್ಯಾಲಯವಾಗಿದ್ದು, ಜನಪ್ರತಿನಿಧಿಗಳೆನಿಸಿರುವ ಶಾಸಕರನ್ನೇ ನ್ಯಾಯಾಂಗ ಜೈಲಿಗಟ್ಟಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇದೆ. ಸಂವಿಧಾನದ ವಿಧಿ 19ರಲ್ಲಿ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಸ್ಪಷ್ಟ ಉಲ್ಲೇಖವಿದ್ದು, ವಿಧಾನಸಭಾಧ್ಯಕ್ಷರು ತೆಗೆದುಕೊಂಡಿರುವ ಕ್ರಮ  ಸಮಂಜಸವಲ್ಲವೆಂದು ರವಿಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ವಾಸ್ತವವಾಗಿ ಮಾದ್ಯಮಗಳಲ್ಲಿ ಮುಕ್ತವಾದ ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಚರ್ಚೆಗಳಿಲ್ಲದೇ ಹೋದಲ್ಲಿ ಸರಕಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಸಾಧ್ಯವೇ ಇಲ್ಲ. ಆ ಮಟ್ಟಕ್ಕೆ ಮಾಧ್ಯಮಗಳು ಇಂದು ಜನರ ಮಧ್ಯೆ ಕಾರ್ಯನಿರ್ವಹಿಸುತ್ತಾ ಜವಬ್ದಾರಿಯ ಸ್ಥಾನದಲ್ಲಿವೆ.  ಈ ಕಾರಣಕ್ಕಾಗಿ ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯದ ಅವಶ್ಯಕತೆಯಿದೆ. ಪ್ರಸ್ತುತ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಜೈಲು ಶಿಕ್ಷೆಯ ಮೂಲಕ ನಿರ್ಬಂಧ ಹೇರಲು ಯತ್ನಿಸುತ್ತಿರುವುದು ಖಂಡನೀಯ. ನಮ್ಮ ಸಂವಿಧಾನವು ಶಾಸಕಾಂಗ, ನ್ಯಾಯಂಗ, ಕಾರ್ಯಾಂಗಗಳಿಗೆ ನಿರ್ಧಿಷ್ಟ ಅಧಿಕಾರದ ಇತಿಮಿತಿಯನ್ನು ನೀಡಿದೆ. ಜನಪ್ರತಿನಿಧಿಗಳು, ಪತ್ರಕರ್ತರ ಮಾನಹನಿಕರ ಲೇಖನಕ್ಕೆ ನ್ಯಾಯಾಂಗವನ್ನು ಮುಕ್ತವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಶಾಸಕಾಂಗದ ಮೂಲಕ ಶಿಕ್ಷೆ ನೀಡುವ ಕೆಟ್ಟ ಸಂಪ್ರಾದಾಯಕ್ಕೆ ನಾಂದಿ ಹಾಡುವಂತಾಗಿರುವುದು ವಿಪರ್ಯಾಸ ಎಂದು ಅವರು ಟೀಕಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಪತ್ರಕರ್ತ ರವಿಬೆಳೆಗೆರೆ ಮತ್ತು ಅನಿಲ್ ರಾಜ್ ಅವರ ಲೇಖನಗಳು ಸದನದ ಸ್ವತಂತ್ರ್ಯ ಮತ್ತು ಹಕ್ಕುಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದೇ ಇದ್ದರೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧದ ಬರೆ ಎಳೆಯಲಾಗಿದೆ. ಸಭಾಧ್ಯಕ್ಷರ ಆದೇಶ ಗಂಭೀರ ಸ್ವರೂಪದ ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಕಳೆದೊಂದು ವರ್ಷದ ಹಿಂದೆ ಕಾಂಗ್ರೆಸ್‍ನ ಪ್ರಭಾವಿ ಸಚಿವರೊಬ್ಬರು ಕೆಲವು ದೃಶ್ಯ ಮಾದ್ಯಮಗಳ ಮೇಲೆ ಸವಾರಿಗೆ ಯತ್ನಿಸುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೀಗ ಸಭಾಧ್ಯಕ್ಷರು ನೀಡಿರುವ ಆದೇಶದಂತೆ “ಮಾನಹಾನಿ” ವ್ಯಾಖ್ಯಾನದ ವ್ಯಾಪ್ತಿಯೊಳಗೆ ಈ ಪ್ರಕರಣ ಬರಲಿದೆಯೆ ಎನ್ನುವುದನ್ನು ನಿರ್ಣಯಿಸಬೇಕಾಗಿರುವುದು ನ್ಯಾಯಲಯ. ಸದನದ ಶಾಸಕರಾಗಿದ್ದುಕೊಂಡು ತಾವೇ ಪತ್ರಕರ್ತರ ವಿರುದ್ಧ ಸದನದ ಹಕ್ಕು ಭಾದ್ಯತಾ ಸಮಿತಿಗೆ ದೂರುದಾರರಾಗಿ ಅದೇ ಸಮಯ ತಾವೇ ಸಭಾಧ್ಯಕ್ಷರಾಗಿದ್ದುಕೊಂಡು ತೀರ್ಪು ನೀಡುವುದು ಪ್ರಜಾಪ್ರಭುತ್ವದ ದುರಂತವೆಂದು ರವಿಕುಶಾಲಪ್ಪ ಆರೋಪಿಸಿದ್ದಾರೆ.

ದೂರುದಾರರು ಮತ್ತು ಶಿಕ್ಷೆ ನೀಡುವವರು ಒಬ್ಬರೇ ಆದರೆ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿರುವ ಅವರು, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯತ್ನವನ್ನು ಯಾರೇ ಮಾಡಿದರೂ ಅದು ಖಂಡನೀಯವೆಂದು ತಿಳಿಸಿದ್ದಾರೆ. ಸಭಾಧ್ಯಕ್ಷರ ಈ ನಿರ್ಧಾರ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲವೆಂದು ಟೀಕಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: