ಕ್ರೀಡೆ

ಬಿಎಂಡಬ್ಲ್ಯು ಕಾರು ವಾಪಸ್ ಮಾಡಲು ನಿರ್ಧರಿಸಿದ ಜಿಮ್ನ್ಯಾಸ್ಟ್ ದೀಪಾ ಕರ್ಮಾಕರ್

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ ಮೊತ್ತ ಮೊದಲ ಮಹಿಳೆ ಎಂಬ ಹೆಸರಿಗೆ ಪಾತ್ರರಾಗಿದ್ದ ದೀಪಾ ಕರ್ಮಾಕರ್ ತಮಗೆ ಉಡುಗೊರೆಯಾಗಿ ಸಿಕ್ಕಿದ್ದ ಬಿಎಂಡಬ್ಲ್ಯು ಕಾರನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ.

ದೀಪಾ ಅವರ ಊರಾದ ಅಗರ್ತಲದಲ್ಲಿ ಬಿಎಂಡಬ್ಲ್ಯು ಸ್ವಿಸ್ ಸೆಂಟರ್ ಮತ್ತು ಸಮರ್ಪಕ ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್‍ ಅವರಿಗೆ ವಾಪಸ್ ನೀಡಲಿದ್ದಾರೆ.

ದೀಪಾ ಮತ್ತು ಒಲಿಂಪಿಕ್ಸ್ ಸಾಧಕರಾದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ, ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಕೋಚ್ ಪುಲ್ಲೇಲ ಗೋಪಿಚಂದ್‍ಗೆ ಅವರಿಗೆ ಕಳೆದ ಆಗಸ್ಟ್‍ನಲ್ಲಿ ಸಚಿನ್ ತೆಂಡೂಲ್ಕರ್‍ ಬಿಎಂಡಬ್ಲ್ಯು ಕಾರ್‍ಗಳನ್ನು ಹಸ್ತಾಂತರಿಸಿದ್ದರು.

ಅಗರ್ತಲದಲ್ಲಿ ಬಿಎಂಡಬ್ಲ್ಯು ಕಾರ್ ಸರ್ವಿಸ್ ಸ್ಟೇಷನ್ ಇಲ್ಲ. ಅಲ್ಲದೆ, ಅದರ ನಿರ್ವಹಣೆಯೂ ತುಂಬಾ ದುಬಾರಿಯಾಗಿದೆ. ಮತ್ತು ಅಗರ್ತಲದ ರಸ್ತೆಯಲ್ಲಿ ಬಿಎಂಡಬ್ಲ್ಯುನಂತಹ ದುಬಾರಿ ಕಾರುಗಳ ಓಡಾಟ ಕಷ್ಟವಾಗಿರುವುದರಿಂದ ದೀಪಾ ಪೋಷಕರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ದೀಪಾ ಅವರ ಕೋಚ್ ಬಿಶ್ವೇಶ್ವರ್ ನಂದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾರಿನ ನಿರ್ವಹಣೆ ಮತ್ತು ಅಸಮರ್ಪಕ ರಸ್ತೆಯ ಹಿನ್ನೆಲೆಯಲ್ಲಿ ಆಕೆ ಕಾರನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ. ನಾವು ಈ ಬಗ್ಗೆ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನೊಂದಿಗೆ ಮಾತುಕತೆ ನಡೆಸಿದ್ದು, ಅವರು ಕಾರನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಕಾರಿನ ಬೆಲೆಯ ಮೊತ್ತವನ್ನು ದೀಪಾ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

Leave a Reply

comments

Related Articles

error: