ಮೈಸೂರು

ಸಂಸದ ಪ್ರತಾಪ್ ಸಿಂಹರಿಂದ 8 ಮಂದಿ ವಿಕಲಚೇತನರಿಗೆ ತ್ರಿಚಕ್ರವಾಹನ ವಿತರಣೆ

ಸಂಸದ ಪ್ರತಾಪ್‌ ಸಿಂಹ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯ ಅನುದಾನದಡಿ ಮೈಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ 8 ಮಂದಿ ವಿಕಲಚೇತನರಿಗೆ ತ್ರಿಚಕ್ರವಾಹನಗಳನ್ನು ನಗರದ ಜಲದರ್ಶಿನಿಯಲ್ಲಿ ಗುರುವಾರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಶೇ.75ರಷ್ಟು ಅಂಗವೈಕಲ್ಯತೆ ಹೊಂದಿರುವ 8 ಮಂದಿ ವಿಕಲಚೇತನರಿಗೆ 56,971 ರು. ಮೊತ್ತದ ತ್ರಿಚಕ್ರವಾಹನಗಳನ್ನು ವಿತರಿಸುತ್ತಿದ್ದೇವೆ. ಅಂಗವೈಕಲ್ಯತೆ ಉಳ್ಳವರು ಎಲ್ಲಾದರು ಕಂಡರೆ ಅಯ್ಯೋ ಪಾಪ ಎಂದು ಕೇವಲ ಮರುಕವ್ಯಕ್ತಪಡಿಸಿ ಸುಮ್ಮನಾಗುತ್ತೇವೆ. ಅವರಿಗೆ ಸೌಲಭ್ಯಗಳನ್ನು ಕಲ್ಪಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಅವರು ಕೂಡ ನಮ್ಮಂತೆಯೇ ಎಂದು ಗೌರವದಿಂದ ಕಾಣುವ, ಅವರೂ ನಮ್ಮಂತೆಯೇ ಬದುಕುವಂತಾಗುವ ಉದ್ದೇಶದಿಂದ ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಂಸದರ ನಿಧಿಯಿಂದ ವಾಹನಗಳನ್ನು ವಿತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೂ 8ರಿಂದ 10 ವಾಹನಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮೈಸೂರು ತಾಲೂಕಿನ ಮಹದೇವಸ್ವಾಮಿ, ಕೆ.ಜಿ.ನಾಗರತ್ನ, ಪಿರಿಯಾಪಟ್ಟಣದ ಲತಾ.ಡಿ.ಜಿ, ಸತೀಶ, ಡಿ.ಎಸ್.ಗಣೇಶ್, ಟಿ.ಸಿ.ವಿವೇಕಾನಂದ, ನಾಗರಾಜ ಎಚ್.ಟಿ., ರಾಣಿ ಎಂಬುವವರಿಗೆ ತ್ರಿಚಕ್ರವಾಹನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಮೇಯರ್ ವನಿತಾ ಪ್ರಸನ್ನ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: