ಕರ್ನಾಟಕ

ರಸ್ತೆ ಗುಂಡಿ ಕೊರಕಲು ಬಿದ್ದು ಸಂಪೂರ್ಣ ಹಾಳಾಗಿದ್ದು ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿ ಎಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ

ರಾಜ್ಯ(ಮಂಡ್ಯ)ಜು.1:-ಕೆ.ಆರ್.ಪೇಟೆ  ತಾಲೂಕಿನ ಚಿಕ್ಕಳಲೆ ಗೇಟ್‍ನಿಂದ ಚೌಡೇನಹಳ್ಳಿ ಮಾರ್ಗವಾಗಿ ರಾಮನಹಳ್ಳಿಯವರೆಗೆ ಹಾದು ಹೋಗಿರುವ ರಸ್ತೆ ಗುಂಡಿ ಕೊರಕಲು ಬಿದ್ದು ಸಂಪೂರ್ಣ ಹಾಳಾಗಿದ್ದು ಇದನ್ನು ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಮುದುಗೆರೆ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮತ್ತು ರೈತಸಂಘದ ಚೌಡೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷೆ ಲತಾಕೇಶವ್ ನೇತೃತ್ವದಲ್ಲಿ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಜಿ.ಪಂ ಎಂಜಿಯರಿಂಗ್ ಕಚೇರಿಗೆ ಮುತ್ತಿಗೆ ಹಾಕಿದ ರೈತಸಂಘದ ಕಾರ್ಯಕರ್ತರು ಎಂಜಿನಿಯರ್ ಕಚೇರಿಯ ಮುಂದೆ ಧರಣಿ ನಡೆಸಿದರಲ್ಲದೆ ಕಚೇರಿಯೊಳಗಿದ್ದ ಇಂಜಿನಿಯರ್ ಗೆ  ದಿಗ್ಬಂಧನ ವಿಧಿಸಿ ದುಸ್ಥಿತಿಯಲ್ಲಿರುವ ಚಿಕ್ಕಳಲೆ- ಚೌಡೇನಹಳ್ಳಿ- ರಾಮನಹಳ್ಳಿ ರಸ್ತೆಯನ್ನು ತಕ್ಷಣವೇ ದುರಸ್ಥಿಗೆ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಿರಿಯ ರೈತಮುಖಂಡ ಎಂ.ವಿ.ರಾಜೇಗೌಡ ಮೈಸೂರು ಮುಖ್ಯರಸ್ತೆಯ ಚಿಕ್ಕಳಲೆ ಗೇಟಿನಿಂದ ರಾಮೇನಹಳ್ಳಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದ್ದು ವಾಹನಗಳ ಸಂಚಾರವಿರಲಿ ಜನರೇ ತಿರುಗಾಡಲಾರದ ಸ್ಥಿತಿಯಲ್ಲಿದೆ. ರಾತ್ರಿ ವೇಳೆ ದಾರಿಹೋಕರು ರಸ್ತೆ ಗುಂಡಿಗಳಲ್ಲಿ ಎಡವಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಸದರಿ ರಸ್ತೆಯನ್ನು ಸರಿಪಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದಲೂ ಈ ಭಾಗದ ರೈತರು ಜಿಲ್ಲಾ ಪಂಚಾಯತ್ ಇಲಾಖೆಗೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಜಿಲ್ಲಾ ಪಂಚಾಯತಿ ಎಂಜಿನಿಯರುಗಳು ಹಾಳಾಗಿರುವ ರಸ್ತೆಯನ್ನು ಸರಿಪಡಿಸಲು ಹಣ ಬಳಕೆ ಮಾಡದೆ ತಮಗೆ ಹೆಚ್ಚು ಕಮೀಷನ್ ಸಿಗುವ ರಸ್ತೆಗಳ ರಿಪೇರಿ ಮಾಡುತ್ತಿದ್ದಾರೆ. ಕೆಲವು ಕಡೆ ತಾಲೂಕು ಪಂಚಾಯತಿಯಿಂದ ನಿರ್ಮಿಸಿದ ರಸ್ತೆಗಳಿಗೆ ಜಿ.ಪಂ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬಿಲ್ ಬರೆದುಕೊಂಡು ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಜನರ ಕಷ್ಟ-ಸುಖಗಳಿಗೆ ಕ್ಷೇತ್ರದ ಶಾಸಕರು ಧ್ವನಿಯಾಗುತ್ತಿಲ್ಲ. ಸದರಿ ರಸ್ತೆಯಲ್ಲಿ ನಿತ್ಯ ನೂರಾರು ಲಾರಿಗಳು ಸಮೀಪದ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡುತ್ತಿದ್ದವು. ಈಗ ರಸ್ತೆ ಹಾಳಾಗಿರುವುದರಿಂದ ಅವು ಬಳಸು ಮಾರ್ಗದಲ್ಲಿ ಸಂಚರಿಸುತ್ತಿದ್ದು ಇದರಿಂದ ರೈತರ ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಚೌಡೇನಹಳ್ಳಿ ಗ್ರಾಮದಲ್ಲಿರುವ ಹಾಲಿನ ಡೈರಿಯಿಂದ ನಿತ್ಯ ಬೆಳಿಗ್ಗೆ ಮತ್ತು ಸಂಜೆ 320 ಲೀ ಹಾಲು ಸಂಗ್ರಹವಾಗುತ್ತಿದೆ. ರಸ್ತೆ ಹಾಳಾಗಿರುವುದರಿಂದ ಹಾಲಿನ 5ಕಿ.ಮೀ ಬಳಸಿ ಡೈರಿಗೆ ಬರುತ್ತಿರುವುದರಿಂದ ಮನ್‍ಮುಲ್ ಹೆಚ್ಚುವರಿ ಸಾಗಾಣಿಕೆ ವೆಚ್ಚವನ್ನು ಹಾಲು ಉತ್ಪಾದಕ ಮೇಲೆ ಹಾಕುತ್ತಿದೆ. ಮೊದಲೇ ಬರಗಾಲದಿಂದ ತತ್ತರಿಸುತ್ತಿರುವ ರೈತರು ಹಾಳಾದ ರಸ್ತೆಯಿಂದ ಮತ್ತಷ್ಟು ನಷ್ಠಕ್ಕೆ ಸಿಲುಕಿದ್ದಾನೆ, ಶುಗರ್ ಸೆಸ್ ಹಣದಿಂದ ಈ ರಸ್ತೆಯನ್ನು ಅಭಿವೃದ್ದಿಪಡಿಸಬಹುದು. ಆದರೆ ಕ್ಷೇತ್ರದ ಶಾಸಕರು ತಮ್ಮ ಅನುದಾನ ಮತ್ತು ಶುಗರ್ ಸೆಸ್ ಹಣವನ್ನು ಜನರ ಅಗತ್ಯತೆಗೆ ಬಳಕೆ ಮಾಡದೆ ತಮ್ಮ ಬೆಂಬಲಿಗರಿಗೆ ಸಹಾಯ ಮಾಡಲು ಡ್ರೈನೇಜ್ ನಿರ್ಮಾಣ ಮತ್ತಿತರ ಅನುಪಯುಕ್ತ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆಂದು ಟೀಕಿಸಿದರಲ್ಲದೆ ಸದರಿ ರಸ್ತೆಯ ರಿಪೇರಿಗೆ ಮುಂದಾಗುವಂತೆ ಶಾಸಕರನ್ನು ಒತ್ತಾಯಿಸಿದರು. ಶಾಸಕರು  ತಾನು ವಿರೋಧ ಪಕ್ಷದ ಶಾಸಕನಾಗಿದ್ದು ರಾಜ್ಯ ಸರ್ಕಾರ ಅಭಿವೃದ್ದಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ನನಗೆ ಒಂದಷ್ಟು ಕಾಲಾವಕಾಶ ನೀಡಿ. ಸದರಿ ರಸ್ತೆಯನ್ನು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿಸಿ ಹೊಸದಾಗಿ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನ ವಾಪಸ್ ಪಡೆದರು. ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕಾರಿಗನಹಳ್ಳಿ ಪುಟ್ಟೆಗೌಡ, ಮಡುವಿನಕೋಡಿ ಪ್ರಕಾಶ್, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ನಾರಾಯಣಸ್ವಾಮಿ ರಂಗರಾಜು, ತಾಲೂಕು ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸುಂದರಮ್ಮ, ಕರಿಯಮ್ಮ, ಕಲಾವತಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು. ಶಾಸಕರೊಂದಿಗೆ ಜಿ.ಪಂ ಸದಸ್ಯರಾದ ಹೆಚ್.ಟಿ.ಮಂಜು, ರಾಮದಾಸ್, ತಾ.ಪಂ ಉಪಾಧ್ಯಕ್ಷ ಜಾನಕೀರಾಂ ಮತ್ತಿತರರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಶಾಸಕರಿಗೆ ಸಹಕರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: