ದೇಶಪ್ರಮುಖ ಸುದ್ದಿವಿದೇಶ

ಭಾರತದಲ್ಲಿ ಹಿಂಸಾಚಾರ ನಡೆಸ್ಬೇಕು, ದಾರಿ ಕ್ಲಿಯರ್ ಮಾಡಿ! ಪಾಕಿಸ್ತಾನವನ್ನು ಆಗ್ರಹಿಸಿದ ಮಸೂದ್ ಅಜ಼ರ್

“ಭಾರತದ ಮೇಲೆ ದಾಳಿ ನಡೆಸಲು ಜಿಹಾದಿ ಗುಂಪುಗಳು ಸಿದ್ಧವಾಗಿದ್ದು, ಪಾಕಿಸ್ತಾನ ಸರ್ಕಾರವು ಇದಕ್ಕಿರುವ ಅಡ್ಡಿ ನಿವಾರಿಸಿ ತಮಗೆ ದಾರಿ ಕ್ಲಿಯರ್ ಮಾಡಿಕೊಡಬೇಕು” – ಇದು ಜೈಶ್-ಎ-ಮೊಹಮ್ಮದ್ (ಜೆಇಎಮ್) ಮುಖ್ಯಸ್ಥ ಮತ್ತು ಪಠಾಣ್ ಕೋಟ್‍ ದಾಳಿಯ ಕುತಂತ್ರಿ ಉಗ್ರವಾದಿ ಮಸೂದ್ ಅಜ಼ರ್ ಪಾಕಿಸ್ಥಾನ ಸರ್ಕಾರಕ್ಕೆ ಆಗ್ರಹಿಸಿರುವ ಪರಿ.

ಜೆಇಎಂ ಸಂಘಟನೆಯ ಸಾಪ್ತಾಹಿಕ ಮುಖವಾಣಿ ‘ಅಲ್-ಖಲಮ್’ನಲ್ಲಿ ತಾನು ಬರೆದಿರುವ ಲೇಖನದಲ್ಲಿ, “ಪಾಕಿಸ್ತಾನದಲ್ಲಿ ನಾಯಕತ್ವದಲ್ಲಿನ ಇಚ್ಛಾಶಕ್ತಿ ಕೊರತೆಯಿಂದ ಕಾಶ್ಮೀರ ವಶಮಾಡಿಕೊಳ್ಳುವ ಅಮೂಲ್ಯ ಐತಿಹಾಸಿಕ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ. ಸರ್ಕಾರ ಮುಜಾಹಿದೀನ್‍ ಗಳಿಗೆ ದಾರಿ ಸುಗಮಗೊಳಿಸಿದರೆ 1971ರ ಸೋಲಿನ ಕಹಿ ನೆನಪುಗಳನ್ನು ಮರೆಸುವಂಥ ವಿಜಯವನ್ನು ತಂದುಕೊಡಲಿದ್ದಾರೆ” ಎಂದು ಬಡಾಯಿ ಕೊಚ್ಚಿದ್ದಾನೆ.

“ಕಾಶ್ಮೀರದಲ್ಲಿ ಜಿಹಾದಿಗಳನ್ನು ಹುಟ್ಟುಹಾಕುವುದಕ್ಕಿಂತ ಮುಂಚಿನ ಮತ್ತು ನಂತರದ ಭಾರತದ ಪರಿಸ್ಥಿತಿಯನ್ನು ನೋಡಿ. ಮೊದಲು ಘಟಸರ್ಪದಂತಿದ್ದ ಭಾರತ ನಂತರ ಎರೆಹುಳುವಿನಂತಾಗಿದೆ. ಈ ಕರಾಳ ಪಯಣಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ” ಎನ್ನುವ ಮೂಲಕ ಕಾಶ್ಮೀರದಲ್ಲಿ ಉಗ್ರವಾದಕ್ಕೆ ಪಾಕಿಸ್ತಾನವೇ ಕಾರಣ ಎನ್ನುವ ಸತ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾನೆ.

ಮಸೂದ್ ಅಜ಼ರ್ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ಼್ ಸಯೀದ್ ವಿರುದ್ಧ ಕ್ರಮ ಕೈಗೊಂಡರೆ ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತಪ್ಪಿದ್ದಲ್ಲ ಎನ್ನುವುದು ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದರ ಇತ್ತೀಚಿನ ವಿಶ್ಲೇಷಣೆಯಾಗಿತ್ತು. ಇದರಿಂದ ಉತ್ತೇಜಿತಗೊಂಡ ಮಸೂದ್ ಅಜ಼ರ್, ಭಾರತದ ವಿರುದ್ಧ ಲೇಖನ ಬರೆದು ಪಾಕಿಸ್ತಾನ ಸರ್ಕಾರಕ್ಕೆ ಬಹಿರಂಗವಾಗಿ ಆಗ್ರಹಿಸಿದ್ದಾನೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಆಪತ್ತು:

ಭಾರತ ಮತ್ತು ಆಫ್ಘಾನಿಸ್ತಾನ ವಿರೋಧಿ ಉಗ್ರಗಾಮಿ ಕಾರ್ಯಾಚರಣೆಗಳು ಮತ್ತು ದೇಶದೊಳಗೆ ನಡೆದ ಕೆಲವು ಉಗ್ರವಾದಿ ದಾಳಿಗಳ ವಿರುದ್ಧ ದನಿ ಎತ್ತಿದ ಪತ್ರಕರ್ತರನ್ನೂ ಪಾಕಿಸ್ತಾನ ಸರ್ಕಾರ ಹಲವು ಕಟ್ಟುಪಾಡುಗಳಿಂದ ನಿರ್ಬಂಧಿಸುತ್ತಿದೆ.

ತಾಲಿಬಾನ್, ಹಕ್ಕಾನಿ ನೆಟ್ವರ್ಕ್, ಲಷ್ಕರ್-ಇ-ತೊಯ್ಬಾ ಉಗ್ರಗಾಮಿಗಳ ನಿರ್ದಯ ಕೃತ್ಯಗಳಿಗೆ ಬೆಂಬಲಿಸುವ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಡುವಿನ ಸಂಘರ್ಷದ ಕುರಿತು ವರದಿ ಮಾಡಿದ ‘ದಿ ನೇಷನ್’ ಪತ್ರಿಕೆಯ ಪತ್ರಕರ್ತ ಸಿರಿಲ್ ಅಲ್ಮೆದಿಯಾ ಅವರನ್ನು ಪಾಕಿಸ್ತಾನ ಸರ್ಕಾರವು ದೇಶ ಬಿಟ್ಟು ಆಚೆ ಹೋಗದಂತೆ ನಿರ್ಬಂಧಿಸಿದೆ. “ಭಾರತ ವಿರೋಧಿ ಕಾರ್ಯಾಚರಣೆಗಳಲ್ಲಿ ಉಗ್ರಗಾಮಿಗಳು ಪ್ರಮುಖ ಪಾತ್ರಧಾರಿಗಳು. ಹೀಗಿರುವಾಗ ಸರ್ಕಾರ ಮತ್ತು ಸೇನೆ ಇವರ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವೇ ಇಲ್ಲ” ಎಂದು ಸೇನೆ ಮತ್ತು ಉಗ್ರಗಾಮಿ ಸಂಘಟನೆಗಳ ಅನ್ಯೋನ್ಯ ನಂಟಿನ ಕುರಿತು ಈ ವರದಿಯಲ್ಲಿ ಸವಿವರವಾಗಿ ಚಿತ್ರಣ ನೀಡಲಾಗಿತ್ತು

ಪಾಕಿಸ್ತಾನದ ಮತ್ತೊಂದು ಪ್ರಮುಖ ಪತ್ರಿಕೆಯಾದ ‘ದಿ ಡೈಲಿ’ ಪ್ರಕಾರ, ಸರ್ಕಾರ ಮತ್ತು ಮಿಲಿಟರಿ ಪತ್ರಕರ್ತರು ಹೇಗೆ ವರ್ತಿಸಬೇಕು ಎಂಬುದನ್ನು ಪಾಠಮಾಡುತ್ತಿರುವ ಈ ದಿನ ಪತ್ರಿಕೋದ್ಯಮಕ್ಕೆ ಕರಾಳ ಎಂದಿದೆ. ಹೀಗಾಗಿ ಪಾಕಿಸ್ತಾನದ ನಾಗರಿಕರಿಗೇ ಅಲ್ಲಿ ಉಸಿರುಕಟ್ಟುವಂಥ ಪರಿಸ್ಥಿತಿ ಬಂದೊದಗಿದೆ ಎಂಬುದು ಸ್ಪಷ್ಟ.

Leave a Reply

comments

Related Articles

error: