ಕರ್ನಾಟಕ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ : ಸತ್ರ ನ್ಯಾಯಾಧೀಶ ಪವನೇಶ್

ರಾಜ್ಯ(ಮಡಿಕೇರಿ)ಜು.2:- ದೇಶದ ಸಂವಿಧಾನದ 51(ಎ) ಅಡಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಬಗ್ಗೆ ನಾವುಗಳು ಕಾಳಜಿ ತೋರಬೇಕಾಗುತ್ತದೆ. ಕಾನೂನಿಂದಲೇ ಇದೆಲ್ಲವನ್ನೂ ರಕ್ಷಿಸಲು ಸಾಧ್ಯವಿಲ್ಲ, ಬದಲಿಗೆ ಸಾರ್ವಜನಿಕರ ಸಹಕಾರದಿಂದ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್ ಡಿ. ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನೆಹರು ಯುವಕೇಂದ್ರ, ಗ್ರೀನ್ ಸಿಟಿ ಫೋರಂ, ರೋಟರಿ ಕ್ಲಬ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಓಡಿಪಿ ಸಂಸ್ಥೆ, ತಾಲ್ಲೂಕು ಯುವ ಒಕ್ಕೂಟ, ಅರಣ್ಯ ಇಲಾಖೆ, ಮಡಿಕೇರಿ, ಗ್ರಾಮ ಪಂಚಾಯತ್, ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕಾರ್ನರ್ ಫ್ರೆಂಡ್ಸ್, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಕಡಗದಾಳು ಗ್ರಾಮ ಇವರ ಸಂಯುಕ್ತಾಶ್ರಯದಲ್ಲಿ ಬೊಟ್ಟಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಅಂಗವಾಗಿ ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯಿತು. ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನ್ಯಾಯಾಧೀಶರು ಗಿಡ ನೆಡುವುದು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ಪರಿಸರ ಕಾಳಜಿ ಪಾಲಿಸುವಂತಾಗಬೇಕು. ಪರಿಸರದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಪಿ.ಯು.ಪ್ರೀತಂ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ. ಪ್ರವಾಸಿಗರಿಗೆ, ಮಕ್ಕಳಿಗೆ ವಿವಿಧ ಸಸಿಗಳ ಬೀಜಗಳನ್ನೊಳಗೊಂಡ ಮಣ್ಣಿನಿಂದ ಮಾಡಿದ ಚೆಂಡುಗಳನ್ನು ನೀಡಿ ಅವರು ಅದನ್ನು ಎಲ್ಲೆಂದರಲ್ಲಿ ಬಿಸಾಡಿದಾಗ ಅಲ್ಲಿ ಪ್ರಾಕೃತಿಕವಾಗಿ ಸಸಿ ಹುಟ್ಟುವಂತಹ ವ್ಯವಸ್ಥೆಯ ಬಗ್ಗೆ ತಿಳಿಸಿದರು. ಗ್ರಾ.ಪಂ. ಉಪಾಧ್ಯಕ್ಷರಾದ ಎಂ.ಪಿ.ತಿಮ್ಮಯ್ಯ ಅವರು ಮಾತನಾಡಿ ನಾವು ಇಂದು ಆಧುನಿಕತೆಯ ನೆಪ ಹೇಳಿ ವಿಷಯುಕ್ತ ಗಾಳಿ, ಪರಿಸರದಲ್ಲಿ ಜೀವಿಸುವಂತಾಗಿದೆ. ಇದು ಕೇವಲ ಸಂಬಂಧಿಸಿದ ಇಲಾಖೆಗಳಿಗೆ ಮಾತ್ರ ಸಂಬಂದಿಸಿದಲ್ಲ. ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.ಸಹಾಯಕ ಪರಿಸರಧಿಕಾರಿ ಅವರು ಮಾತನಾಡಿ ಗಿಡ ನೆಡುವುದಕ್ಕೂ ಕುಡಿಯುವ ನೀರಿಗೂ ಸಂಬಂಧವಿದೆ. ಉತ್ತಮ ಪರಿಸರವಿದ್ದಾಗ ನೀರು ಮಾಲಿನ್ಯವಾಗದೆ ಶುದ್ಧವಾಗಿರುತ್ತದೆ. ಕೊಡಗನ್ನು ಪರಿಸರ ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಇಲಾಖೆಯ ಗುರಿಯಾಗಿದೆ ಎಂದರು.
ವೇದಿಕೆಯಲ್ಲಿ ಗ್ರೀನ್ ಸಿ.ಟಿ. ಪೋರಂನ ರತನ್ ತವ್ಮ್ಮಯ್ಯ, ಅರಣ್ಯ ಅಧಿಕಾರಿ ವಿನುತಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೀಲಮ್ಮ, ಯುವ ಸಂಘದ ಅಧ್ಯಕ್ಷರಾದ ಕೆ.ಬಾಲನ್, ಓಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಟಿ.ಆರ್.ವಾಸು, ಬಿ.ಡಿ.ನಾರಾಯಣ ರೈ, ಎಂ.ಎಸ್.ಯೂಸಫ್, ಜಲೀಲ್, ರಮೇಶ ರೈ, ಗೀತಾ ರಮೇಶ, ರಮೇಶ ಆಚಾರಿ, ಕೆ.ಅಯ್ಯಪ್ಪ ಕೊರವಂಡ ಮಾಚಯ್ಯ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: