ಕರ್ನಾಟಕಪ್ರಮುಖ ಸುದ್ದಿ

ಯಾರಿಗೆ ಪಕ್ಷ ಟಿಕೆಟ್ ನೀಡಲಿದೆಯೋ ಅವರನ್ನು ಒಗ್ಗಟ್ಟಿನಿಂದ ಗೆಲ್ಲಿಸುವ ಕೆಲಸವಾಗಬೇಕು : ದಿನೇಶ್ ಗುಂಡೂರಾವ್

ರಾಜ್ಯ(ಮಂಡ್ಯ)ಜು.3:- ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಗುಪ್ತವಾಗಿ ಸರ್ವೆ ನಡೆಸಲಾಗುತ್ತಿದೆ. ಸರ್ವೆಯಲ್ಲಿ ಯಾರೂ ಗೆಲ್ಲುವ ಅಭ್ಯರ್ಥಿ ಎಂಬುದು ಮನವರಿಕೆಯಾದ ನಂತರ ಯಾರಿಗೆ ಗೆಲ್ಲುವ ಸಾಮರ್ಥ್ಯ ವಿದೆಯೋ ಅಂತಹವರಿಗೆ ಟಿಕೆಟ್ ನೀಡಲಾಗುತ್ತದೆ. ಆಕಾಂಕ್ಷಿಗಳು ಎಷ್ಟೇ ಜನರಿರಲಿ, ಯಾರಿಗೆ ಪಕ್ಷ ಟಿಕೆಟ್ ನೀಡುತ್ತದೋ ಅವರನ್ನು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಬೇಕು. ಯಾರೂ ಸಹ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್‍ಗುಂಡೂರಾವ್ ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿರುವ ಕವಿ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಿಕ್ಕೇರಿ ಹೋಬಳಿ ಮಟ್ಟದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 4ವರ್ಷಗಳ ತಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಉತ್ತಮ ಆಡಳಿತ ನೀಡಿದ್ದಾರೆ. ಅಲ್ಲದೆ ಎಲ್ಲಾ ವರ್ಗದವರಿಗೂ ಒಂದೊಂದು ರೀತಿಯಲ್ಲಿ ಯೋಜನೆಗಳನ್ನು ರೂಪಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿರುವುದನ್ನು ಅರಿತು ಸುಮಾರು 8500ಕೋಟಿ ರೂಗಳಷ್ಟು ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಪ್ರೀತಿಪಾತ್ರರಾಗಿದ್ದಾರೆ ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರುವುದು ಖಚಿತ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಒಂದು ಗಂಟೆಯಲ್ಲಿ ಅನ್ನಭಾಗ್ಯ ಯೋಜನೆ ರೂಪಿಸಿ ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯದ ಕೆಲಸ ಮಾಡಿದರು. ನಾನು ಆಗ ಆಹಾರ ಸಚಿವನಾಗಿದ್ದೆ ಈ ಯೋಜನೆಯಿಂದ ಒಂದೂವರೆ ಕೋಟಿ ಬಡವರಿಗೆ ಅನುಕೂಲವಾಗಿದೆ. ಅಲ್ಲದೆ ಸುಮಾರು 30ರಿಂದ 40ವರ್ಷಗಳ ಹಿಂದಿನಿಂದ ಸಾಲ ಪಡೆದು ಕಟ್ಟಲಾಗದೆ ತೊಂದರೆಗೀಡಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಅಂಬೇಡ್ಕರ್ ಅಭಿವೃದ್ದಿ ನಿಗಮದ ಸುಮಾರು 2500ಕೋಟಿ ಸಾಲವನ್ನು ಮನ್ನಾ ಮಾಡಿದರು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸುಮಾರು 40ಸಾವಿರ ಕೋಟಿ ಸಾಲ ನೀಡಿದರು. ಇದೀಗ ರಾಜ್ಯದ ಸುಮಾರು 23ಲಕ್ಷ ರೈತ 8500ಕೋಟಿ ಸಹಕಾರಿ ವಲಯದ ಸಾಲವನ್ನು ಮನ್ನಾ ಮಾಡಿದ್ದಾರೆ. ತಾಲೂಕಿನಲ್ಲಿಯೇ ಸುಮಾರು 16ಸಾವಿರ ಮಂದಿಗೆ ಇದರ ಉಪಯೋಗ ಸಿಕ್ಕಿದೆ. ಇದಕ್ಕಿಂತ ಉತ್ತಮ ಆಡಳಿತ ಯಾರು ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರು ಕಳೆದ ನಾಲ್ಕೂಕಾಲು ವರ್ಷದ ತಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಉತ್ತಮ ಆಡಳಿತ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ ಇದರಿಂದ 2018ರಲ್ಲಿ ನಡೆಯುವ ಚುನಾವಣೆಯಲ್ಲಿಯೂ ನಮ್ಮ ಪಕ್ಷವೇ ಅಧಿಕಾರಕ್ಕೇರುವುದು ಖಚಿತವಾಗಿದೆ ಹಾಗಾಗಿ ಪಕ್ಷದ ಕಾರ್ಯಕರ್ತರು ಕ್ರಿಯಾಶೀಲವಾಗಿ ಪಕ್ಷವನ್ನು ಸಿದ್ದರಾಮಯ್ಯ ಅವರ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ತಳಮಟ್ಟದಿಂದ ಸಂಘಟಿಸುವ ಮೂಲಕ ತಾಲೂಕಿನಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬೃಹತ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸರಬರಾಜು ನಿಗಮದ ರಾಜ್ಯಾಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್, ಜಿ.ಪಂ.ಸದಸ್ಯ ಕೋಡಿಮಾರನಹಳ್ಳಿ ದೇವರಾಜ್, ತಾ.ಪಂ.ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮನ್‍ಮುಲ್ ನಿರ್ದೇಶಕ ಎಸ್.ಅಂಬರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನಾಗೇಂದ್ರಕುಮಾರ್, ಲೆಕ್ಕಪರಿಶೋಧಕ ಕಿರಣ್‍ಕುಮಾರ್, ಕಿಯೋನಿಕ್ಸ್ ನಿಗಮದ ರಾಜ್ಯ ನಿರ್ದೇಶಕ ಎ.ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಮಾಂಗದ, ತಾ.ಪಂ.ಸದಸ್ಯರಾದ ಶ್ಯಾಮಣ್ಣ, ಸಣ್ಣನಿಂಗೇಗೌಡ, ಕಾಂತಾಮಣಿ,  ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: