ದೇಶಪ್ರಮುಖ ಸುದ್ದಿ

ವೈದ್ಯಕೀಯ ವರದಿ ಆಧರಿಸಿ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ, ಜುಲೈ 3 : ಮಗು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ವರದಿಗಳು ಧೃಢಪಡಿಸಿದ ಕಾರಣ 23 ವಾರಗಳ ಗರ್ಭಿಣಿಯೊಬ್ಬರ ಗರ್ಭಪಾತಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಕೆಲವು ನ್ಯೂನತೆಗಳನ್ನು ಹೊಂದಿದ್ದ ಭ್ರೂಣವು ಹೆರಿಗೆಯ ನಂತರ ಮಗು ಬದುಕುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ವೈದ್ಯಕೀಯ ವರದಿಗಳು ಹೇಳಿದ ಕಾರಣ ಕೊಲ್ಕತ್ತಾ ಮೂಲದ ಶರ್ಮಿಷ್ಠಾ ದಂಪತಿ ಗರ್ಭಪಾತ ಮಾಡಿಸುವ ನಿರ್ಧಾರ ತೆಗೆದುಕೊಂದಿದ್ದರು. ಆದರೆ ಭಾರತದಲ್ಲಿ ಗರ್ಭಪಾತ ಕಾನೂನು ಪ್ರಕಾರ ಇದು ಅಪರಾಧವಾಗಿರುವುದರಿಂದ ದಂಪತಿ ನ್ಯಾಯಾಲಯದ ಅನುಮತಿ ಕೋರಿದ್ದರು.

ಶರ್ಮಿಷ್ಠಾ ಚಕ್ರವರ್ತಿ ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಕೆಯ ಆರೋಗ್ಯ ಸ್ಥಿತಿಗತಿ ಮತ್ತು ಅಹವಾಲಿನ ಸತ್ಯಾಸತ್ಯತೆಯನ್ನು ಸವಿವರವಾದ ವರದಿ ನೀಡುವಂತೆ ಅಲ್ಲಿನ ವೈದ್ಯಕೀಯ ಮಂಡಳಿಗೆ ಆದೇಶ ನೀಡಿತ್ತು. ವೈದ್ಯಕೀಯ ಮಂಡಳಿ ನೀಡಿದ ವಿವರಗಳ ಪ್ರಕಾರ ಭ್ರೂಣ ಬದುಕುವುದು ಸಾಧ್ಯವಿಲ್ಲ ಎಂಬುದನ್ನು ಖಾತ್ರಿಯಾಗಿ ಹೇಳಲಾಗಿತ್ತು. ಹೀಗಾಗಿ ಸರ್ವೊಚ್ಚ ನ್ಯಾಯಾಲಯ ಗರ್ಭಪಾತಕ್ಕೆ ಅನುಮತಿ ನೀಡಿತು.

ಮತ್ತೊಂದು ಪ್ರಕರಣದಲ್ಲಿ, ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕಳೆದ ಮೇ ತಿಂಗಳಿನಲ್ಲಿ ಹರ್ಯಾಣದಲ್ಲಿನ ನ್ಯಾಯಾಲಯವೊಂದು ಒಪ್ಪಿಗೆ ನೀಡಿತ್ತು. ತನ್ನ ಮಲ ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ್ದ ಪುಟ್ಟ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಈ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

-ಎನ್.ಬಿ.

Leave a Reply

comments

Related Articles

error: