ಕರ್ನಾಟಕ

ಉನ್ನತ ಅಧಿಕಾರಿಗಳಲ್ಲಿ ದರ್ಪ ಇದ್ದರೆ ಸಾಮಾನ್ಯ ಜನರ ಕೆಲಸ ಮಾಡಲು ಕಷ್ಟವಾಗುತ್ತದೆ : ಎಸ್.ಆರ್.ಉಮಾಶಂಕರ್

ರಾಜ್ಯ(ಮಂಡ್ಯ)ಜು.3:-ಉನ್ನತ ಅಧಿಕಾರಿಗಳಲ್ಲಿ ದರ್ಪ ಇದ್ದರೆ ಸಾಮಾನ್ಯ ಜನರ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಹೇಳಿದರು.
ಅವರ ಹುಟ್ಟೂರು ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಗ್ರಾಮಸ್ಥರಿಂದ ಹೃದಯಸ್ಪರ್ಶಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಇಂತಹ ಇಲಾಖೆಯೇ ಬೇಕು ಎಂದು ನಾನು ಎಂದಿಗೂ ಆಸೆ ಪಡಲಿಲ್ಲ, ಸರ್ಕಾರ ಎಲ್ಲಾ ಇಲಾಖೆಗಳನ್ನು ಜನರ ಸೇವೆಗಾಗಿ ಸೃಷ್ಠಿಸಿದೆ, ಸೇವೆ ಮಾಡಲು ಯಾವ ಹುದ್ದೆಯಾದರೇನು, ಯಾವ ಇಲಾಖೆಯಾದರೇನು ಪ್ರಾಮಾಣಿಕತೆ ಮತ್ತು ಕೆಲಸದ ಮೇಲೆ ಬದ್ಧತೆ ಇದ್ದರೆ ಎಲ್ಲಾ ಕಡೆ ಉತ್ತಮ ಕೆಲಸ ಮಾಡಬಹುದು, ಆದರೆ ಐಎಎಸ್ ಅಧಿಕಾರಿಗಳ ಮನಸ್ಸಿಗೆ ದರ್ಪ, ಅಹಂಕಾರ ಬಂದುಬಿಟ್ಟರೆ ಅವರು ಜನರಿಂದ ದೂರ ಇದ್ದುಬಿಡುತ್ತಾರೆ. ಉನ್ನತ ಅಧಿಕಾರಿಗಳಿಗೆ ಕೇವಲ ಕನ್ನಡ ಓದಲು ಬರೆಯಲು ಬಂದರೆ ಸಾಲದು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸು ಇರಬೇಕು ಇದರಿಂದ ಹೆಚ್ಚು ಉತ್ಸಾಹದಿಂದ ಜನಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಹಾಸನ ಉಪ ವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜು ಮಾತನಾಡಿ, ಉಮಾಶಂಕರ್ ಅತ್ಯಂತ ಸರಳ, ಸ್ನೇಹಮಯಿ, ಪ್ರಾಮಾಣಿಕ ಅಧಿಕಾರಿ ಇಂತಹವರು ಅಪರೂಪ ಎಂದರು. ಸಾಹಿತಿ ಡಾ.ಜಯಲಕ್ಷ್ಮಿ ಸೀತಾಪುರ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ, ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಬಿ.ರೇವಣ್ಣ ಉಮಾಶಂಕರ್ ಅವರಿಗೆ ಭಾರಿ ಗಾತ್ರದ ಗುಲಾಬಿ ಹಾರ ಹಾಕಿ ಗೌರವಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಮಂಡ್ಯ ಅಧ್ಯಕ್ಷ ಪ್ರೊ.ಜಯ್‍ಪ್ರಕಾಶ್‍ಗೌಡ ಉದ್ಘಾಟಿಸಿದರು.
ಉಪ ವಿಭಾಗಾಧಿಕಾರಿ ಆರ್. ಯಶೋದ, ತಹಸೀಲ್ದಾರ್ ಹನುಮಂತರಾಯಪ್ಪ, ಡಾ.ಜಯಪ್ರಕಾಶ್ ಗೌಡ, ರಮೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಡಿ.ರವಿಕುಮಾರ್, ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ್ ಇದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: