ಕರ್ನಾಟಕ

ಇಬ್ಬರು ವಿದ್ಯಾರ್ಥಿಗಳು ನದಿ ಪಾಲು

ಮಡಿಕೇರಿ, ಜು.3 : ಕಾವೇರಿ ನದಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮೂರ್ನಾಡು ಸಮೀಪ ಬಲಮುರಿ ಗ್ರಾಮದಲ್ಲಿ ನಡೆದಿದೆ.

ಮೂರ್ನಾಡು ಕೋಡಂಬೂರು ಗ್ರಾಮದ ಲೋಕೇಶ್ ಎಂಬವರ ಪುತ್ರ, ಮೂರ್ನಾಡು ವಿದ್ಯಾಸಂಸ್ಥೆಯ ದ್ವಿತೀಯ ಬಿಕಾಂ ವಿದ್ಯಾರ್ಥಿ ದರ್ಶನ್ ಎಂ.ಎಲ್.(18) ಹಾಗೂ ಕಾರ್ಯಪ್ಪ ಅವರ ಪುತ್ರ ಅದೇ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ ಜಯಂತ್ ಎಂ.ಕೆ.(14) ಎಂಬುವವರೆ ಸಾವನ್ನಪ್ಪಿರುವ ದುರ್ದೈವಿಗಳು.
ಸಹೋದರ ಸಂಬಂಧಿಗಳಾದ ದರ್ಶನ್ ಹಾಗೂ ಜಯಂತ್ ಭಾನುವಾರ ಮಧ್ಯಾಹ್ನದ ನಂತರ ಕೋಡಂಬೂರಿನಿಂದ ಬಲಮುರಿಯ ಕಾವೇರಿ ನದಿ ಬಳಿಗೆ ತೆರಳಿದ್ದರು. ಮುಂಗಾರಿನ ಅವಧಿಯಲ್ಲಿ ಹೊಳೆಕರೆಯಲ್ಲಿ ದೊರಕುವ ಬಿದಿರಿನ ಕಣಿಲೆ ಕೊಯ್ಯುವ ಪ್ರಯತ್ನ ಮಾಡಿದ್ದರೆಂದು ಹೇಳಲಾಗಿದೆ.  ಸಂಜೆಯಾದರು ಬಾಲಕರು ಮನೆಗೆ ಬಾರದ್ದರಿಂದ ಗಾಬರಿಗೊಂಡ ಮನೆ ಮಂದಿ ಗ್ರಾಮಸ್ಥರ ಸಹಕಾರದೊಂದಿಗೆ ಹುಡುಕಾಟ ನಡೆಸಿದರಾದರು ಪತ್ತೆಯಾಗಿರಲಿಲ್ಲ.
ತಡ ರಾತ್ರಿಯವರೆಗೆ ಹೊಳೆ ಬದಿಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು.

ಸೋಮವಾರ ಬೆಳಗ್ಗೆ ಗ್ರಾಮಸ್ಥರ ಸಹಕಾರದೊಂದಿಗೆ ಅಗ್ನಿ ಶಾಮಕ ದಳ ಶೋಧ ಕಾರ್ಯ ನಡೆಸಿದ ಸಂದರ್ಭ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾದವು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶಿವಪ್ರಕಾಶ್, ಮೂರ್ನಾಡು ಉಪಠಾಣಾ ಎಎಸ್‍ಐ ಪೊನ್ನಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: