ಕರ್ನಾಟಕ

ರಾಷ್ಟ್ರೀಯ ಹೆದ್ದಾರಿ-206 ರಲ್ಲಿನ ಸೇತುವೆ ಅತ್ಯಂತ ಚಿಕ್ಕದ್ದಾಗಿದ್ದು ತ್ವರಿತವಾಗಿ ಅಗಲೀಕರಣಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ತುಮಕೂರು)ಜು.3:-ಗುಬ್ಬಿ ತಾಲೂಕಿನ ಎಂ.ಹೆಚ್.ಪಟ್ಣ ಕೆರೆ ಕೋಡಿ ಬಳಿಯ ರಾಷ್ಟ್ರೀಯ ಹೆದ್ದಾರಿ-206 ರಲ್ಲಿನ ಸೇತುವೆ ಅತ್ಯಂತ ಚಿಕ್ಕದ್ದಾಗಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪ್ರತಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆ ಅಪಘಾತಕ್ಕೆ ಹೇಳಿ ಮಾಡಿಸಿದಂತಿದೆ. ಮೃತ್ಯು ಕೂಪದಂತಿರುವ ಈ ಸೇತುವೆಯನ್ನು ತ್ವರಿತವಾಗಿ ಅಗಲೀಕರಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಹೆದ್ದಾರಿಯ ಸೇತುವೆ ಬದಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಅತ್ಯಂತ ಕಿರಿದಾದ ಈ ಸೇತುವೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕಳೆದ ಮೂರು ತಿಂಗಳ  ಹಿಂದೆಯೂ ಉಪವಾಸ ಸತ್ಯಾಗ್ರಹ ನಡೆಸಿದ್ದು, ಆ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ದುರಸ್ಥಿ ಮಾಡುವುದಾಗಿ ಒಪ್ಪಿಗೆ ನೀಡಿದ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಆದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯತೆ ಖಂಡಿಸಿ ಮತ್ತೆ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಸಿದ್ದಲಿಂಗೇಗೌಡ ಹೇಳಿದರು.
2004 ರಿಂದ ಈ ರಸ್ತೆಯ ದುರಸ್ಥಿ ಮತ್ತು ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡುತ್ತಾ ಬಂದಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ. ಈ ಕಿರು ಸೇತುವೆ ಹೆದ್ದಾರಿ ಮೇಲ್ದರ್ಜೆಗೇರಿದರೂ ಬ್ರಿಟಿಷರ ಕಾಲದ ಈ ಸೇತುವೆ ಸಂಪೂರ್ಣ ನೂತನವಾಗಿ ನಿರ್ಮಾಣ ಮಾಡಬೇಕು. ಲಾರಿಗಳು ಗುದ್ದಿ ಸೇತುವೆಯ ತಡೆಗೋಡೆ ಹಾಳಾಗಿದೆ. ಸುಮಾರು 50 ಮೀಟರ್ ಉದ್ದದ ಈ ಸೇತುವೆಗೆ ತಡೆಗೋಡೆ ಇಲ್ಲವಾಗಿದೆ. ದುರಸ್ಥಿ ಮಾಡಲು ಮುಂದಾದ ಪ್ರಾಧಿಕಾರ ತಡೆಗೋಡೆ ನಿರ್ಮಾಣ ಕಳಪೆಯಿಂದ ಕೂಡಿದೆ ಎಂದು ದೂರಿದರು.
ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿಯ ಉಪವಿಭಾಗಾಧಿಕಾರಿ ಸುಧಾಕರ್, ಪ್ರಸಾದ್, ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್, ಉಪ ತಹಶೀಲ್ದಾರ್ ಜಯಪ್ರಕಾಶ್ ಹಾಗೂ ಪಿಎಸ್‍ಐ ಗಂಗಾಧರ್ ಅವರು ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಈ ಹಿಂದೆ ಪೊಳ್ಳು ಭರವಸೆ ನೀಡಿದ್ದ ಕಾರಣ ಈ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಬರುವವರೆಗೆ ಅಹೋ ರಾತ್ರಿ ಧರಣಿ ನಡೆಸುವುದಾಗಿ ತಿಳಿಸಿ ಸತ್ಯಾಗ್ರಹ ಮುಂದುವರೆಸಿದರು.
ಪ್ರತಿಭಟನೆಯಲ್ಲಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್, ಜಿಲ್ಲಾ ಕಾರ್ಯದರ್ಶಿ ಅರುಣ್, ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್‍ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಗುಬ್ಬಿ ತಾಲೂಕು ಯುವಶಕ್ತಿ ಜನಪರ ವೇದಿಕೆ ಅಧ್ಯಕ್ಷ ಜಿ.ಸಿ.ಶಿವಕುಮಾರ್, ಸಾಮಾಜಿಕ ಹೋರಾಟಗಾರ ಡಮರುಗ ಉಮೇಶ್, ಜಿಲ್ಲಾ ಸಂಚಾಲಕ ಉಮೇಶ್, ಸದಸ್ಯರಾದ ಮೋಹನ್, ನವೀನ್‍ಕುಮಾರ್, ಇಂದ್ರೇಶ್, ತಾ.ಪಂ. ಸದಸ್ಯ ಕರೇತಿಮಯ್ಯ, ಎಪಿಎಂಸಿ ನಿರ್ದೇಶಕ ಶಿವಕುಮಾರ್, ಸ್ಥಳೀಯ ರೈತ ಮುಖಂಡ ಮೋಹನ್‍ಕುಮಾರ್, ಎಎಸ್‍ಐಗಳಾದ ಬಸವರಾಜು, ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: