ಕರ್ನಾಟಕ

ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನ್ಯಾಯಾಂಗ ತನ್ನದೇ ಆದ ಮಹತ್ವ ಹೊಂದಿದೆ : ಜಯಂತ್ ಪಟೇಲ್

ರಾಜ್ಯ(ತುಮಕೂರು)ಜು.3:- ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನ್ಯಾಯಾಂಗ ತನ್ನದೇ ಆದ ಮಹತ್ವ ಹೊಂದಿದೆ. ಬಲಾಢ್ಯರಿಂದ ಅಶಕ್ತರ ಹಕ್ಕುಗಳನ್ನು ಸದಾ ಕಾಪಾಡುತ್ತಾ ಬಂದಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಯಂತ್ ಪಟೇಲ್ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ 3ನೇ ಹಂತದ ಜಿಲ್ಲಾ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಬಲಾಢ್ಯರಿಂದ, ಅಧಿಕಾರವಂತರಿಂದ ಪ್ರಜೆಗಳ ಹಕ್ಕನ್ನು ಕಸಿಯಲಾಗದು. ಎಲ್ಲ ಪ್ರಜೆಗಳ ಹಕ್ಕುಗಳ ಸಂರಕ್ಷಕನಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿದೆ. ಕಾನೂನು ಮೇಲುಗೈ ಪಡೆಯಬೇಕೇ ಹೊರತು ಶಕ್ತಿಯೂ ಅಲ್ಲ, ಅಧಿಕಾರವೂ ಅಲ್ಲ ಎಂದರು.ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಮೂರು ಪ್ರಮುಖ ಲಕ್ಷಣಗಳು ಇರಬೇಕು. ಅದರಲ್ಲಿ ಮೊದಲನೆಯದು ಸ್ಪಷ್ಟ ನೋಟ. ಕಾನೂನಿನ ಜ್ಞಾನವೂ ಇರಬೇಕು. ಇಂತಹ ದೃಷ್ಟಿಕೋನ ಇದ್ದಾಗ ಉತ್ತಮ ಕಾರ್ಯ ಮತ್ತು ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಎರಡನೆಯದು ಜಾಣತನ ಅಥವಾ ವಿವೇಕ. ವಿವೇಕದ ಜ್ಞಾನವಿದ್ದರೆ ಯಾವುದೇ ಒಂದು ಪ್ರಕರಣ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಬರುತ್ತದೆ. ಮೂರನೆಯದು ಸಾಮರ್ಥ್ಯ ಅಥವಾ ಧೈರ್ಯ. ಕಾನೂನನ್ನು ಎತ್ತಿಹಿಡಿಯಬೇಕಾದ ಸಂದರ್ಭ ಬಂದಾಗ ಗೊಂದಲಕ್ಕೆ ಒಳಗಾಗುವ ಅವಕಾಶಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಧೈರ್ಯ ಮತ್ತು ಸಾಮರ್ಥ್ಯವಿದ್ದರೆ ಎಂತಹುದೇ ಪ್ರಕರಣ ಬಂದರೂ ಅದನ್ನು ಆ ಸಾಮರ್ಥ್ಯದಿಂದ ನಿಭಾಯಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಟಿ.ಎನ್.ಗುರುರಾಜ್ ಸ್ವಾಗತಿಸಿದರು. ಪದಾಧಿಕಾರಿ ಧನಂಜಯ ವಂದಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: