ಕರ್ನಾಟಕ

ನೂತನ ಸಮಿತಿ ರಚನೆಗೆ ತೀರ್ಮಾನ

ಸೋಮವಾರಪೇಟೆ, ಜು.4 : ಇಲ್ಲಿನ ಚನ್ನಬಸಪ್ಪ ಸಭಾಂಗಣದ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ದುರಸ್ಥಿಗೊಳಿಸುವ ನಿಟ್ಟಿನಲ್ಲಿ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿ ರಚಿಸುವಂತೆ ಶಾಸಕ ಅಪ್ಪಚ್ಚು ರಂಜನ್‍ರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಚನ್ನಬಸಪ್ಪ ಸಭಾಂಗಣ ದುರಸ್ತಿ, ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸಿ, ನಿರ್ವಹಣೆಯಲ್ಲಿ ವಿಫಲವಾಗಿರುವ ಹಾಲಿ ಸಮಿತಿಯನ್ನು ವಿಸರ್ಜಿಸಿ, ಕ್ರಿಯಾಶೀಲತೆಯಿಂದ ಕೂಡಿರುವ ನೂತನ ಸಮಿತಿ ರಚಿಸುವಂತೆ ತೀರ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್,  ಸುಮಾರು 80ಕ್ಕೂ ಅಧಿಕ ವರ್ಷ ಇತಿಹಾಸ ಹೊಂದಿರುವ ಹಾಗೂ ಇಡೀ ತಾಲೂಕಿಗೆ ಒಂದು ಸಭಾಂಗಣವೆಂದಿದ್ದ ಈ ಸಭಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಸರಕಾರಿ ಕಾರ್ಯಕ್ರಮಗಳು, ವಿವಿಧ ಇಲಾಖೆಗಳ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದೀಗ ಸಭಾಂಗಣ ಕಟ್ಟಡ, ಮೇಲ್ಛಾವಣಿ ಹಾಗೂ ಕಿಟಕಿ ಬಾಗಿಲುಗಳು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಕ್ರಿಯಾಶೀಲತೆಯಿಂದ ಕೂಡಿರುವ ಸಮಿತಿ ರಚನೆಯಿಂದ ಮಾತ್ರ ಹಣವನ್ನು ಕ್ರೋಢೀಕರಿಸಿ ದುರಸ್ಥಿಪಡಿಸಲು ಸಾಧ್ಯ. ಹಾಗೆಯೇ ಅದರ ನಿರ್ವಹಣೆ ಜವಾಬ್ದಾರಿಯನ್ನು ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳು, ಅಧಿಕಾರಿಗಳು ಸೇರಿದಂತೆ ಸಮಿತಿ ರಚಿಸುವುದು ಹಾಗೂ ಸಮಿತಿಗೆ ಕಟ್ಟಡದ ದಾನಿಗಳಾದ ಚನ್ನಬಸಪ್ಪರವರ ಕುಟುಂಬದ ಸದಸ್ಯರನ್ನೂ ಸೇರಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ನೂತನ ಸಮಿತಿಗೆ ಅಧ್ಯಕ್ಷರಾಗಿ ಶಾಸಕರು, ಉಪಾಧ್ಯಕ್ಷರನ್ನಾಗಿ ಗ್ರಾಮದ ಪ್ರಮುಖ ಮಹೇಶ್ ತಿಮ್ಮಯ್ಯ, ಸಂಯೋಜಕರಾಗಿ ಸಹಿಮಾಪ್ರಾ ಶಾಲೆಯ ಮುಖ್ಯೋಪಾಧ್ಯಾಯರು, ಸಮಿತಿ ಸದಸ್ಯರುಗಳಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಿಮಾಪ್ರಾ, ಸರಕಾರಿ ಪ್ರೌಢಶಾಲಾ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ಪತ್ರಕರ್ತರೀರ್ವರನ್ನೊಳಗೊಂಡ ಸಮಿತಿಯನ್ನು ರಚಿಸುವಂತೆ ತೀರ್ಮಾನಿಸಲಾಯಿತು.

ಸಭಾಂಗಣದ ನಿರ್ವಹಣೆಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯನ್ನು ತೆರೆದು ಉಪಾಧ್ಯಕ್ಷರು ಹಾಗೂ ಸಂಯೋಜಕರಾದ ಸಹಿಮಾಪ್ರಾ ಶಾಲಾ ಮುಖ್ಯಶಿಕ್ಷಕರ ಸಹಿಯೊಂದಿಗೆ ನಿರ್ವಹಿಸುವಂತೆ, ಸಮಿತಿಯು ಕನಿಷ್ಠ ಮೂರು ತಿಂಗಳಿಗೊಂದು ಸಭೆಗಳನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಸಭಾಂಗಣದ ದುರಸ್ಥಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಶಾಸಕರು ಸೂಚಿಸಿದರು. ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು. (ವರದಿ:ಕೆಸಿಐ, ಎಲ್.ಜಿ)

Leave a Reply

comments

Related Articles

error: